ನಾರದಾ ಪ್ರಕರಣ: ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಮನವಿ ಪುರಸ್ಕರಿಸಿದ ಹೈಕೋರ್ಟ್
ಕೋಲ್ಕತಾ: ನಾರದಾ ಸ್ಟಿಂಗ್ ಆಪರೇಶನ್ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ನ ಮೂವರು ಮುಖಂಡರನ್ನು ಬಂಧಿಸಿದಾಗ ಕಳೆದ ತಿಂಗಳು ಸಿಬಿಐ ಕಚೇರಿಯ ಹೊರಗೆ ನಡೆದ ಪ್ರತಿಭಟನೆಯ ಕುರಿತು ಸರಕಾರದ ವತಿಯಿಂದ ಅಫಿಡವಿಟ್ ಸಲ್ಲಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ.
ಅಫಿಡವಿಟ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದ ಕಾರಣಕ್ಕೆ ನ್ಯಾಯಾಲಯವು ಮಮತಾ ಹಾಗೂ ಬಂಗಾಳ ಸರಕಾರಕ್ಕೆ 5,000 ರೂ. ದಂಡವನ್ನು ವಿಧಿಸಿದೆ.
ಕಳೆದ ವಾರ, ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಹಾಗೂ ಇತರರು ಸಲ್ಲಿಸಿದ್ದ ಅಫಿಡವಿಟ್ ಸ್ವೀಕರಿಸಲು ನಿರಾಕರಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು
ಅಫಿಡವಿಟ್ಗಳನ್ನು ತೆಗೆದುಕೊಳ್ಳುವುದನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ಗೆ ಕೋರಿ ಹೊಸದಾಗಿ ಮನವಿ ಸಲ್ಲಿಸುವಂತೆ ಬ್ಯಾನರ್ಜಿ ಮತ್ತು ಬಂಗಾಳ ಕಾನೂನು ಸಚಿವ ಮೊಲೊಯ್ ಘಟಕ್ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಅಫಿಡವಿಟ್ಗಳನ್ನು ದಾಖಲಿಸುವಂತೆ ಉನ್ನತ ನ್ಯಾಯಾಲಯವು ಹೈಕೋರ್ಟ್ಗೆ ಆದೇಶಿಸಿದೆ.
ಜೂನ್ 9 ರಂದು ಕಲ್ಕತ್ತಾ ಹೈಕೋರ್ಟ್ನ ಐವರು ನ್ಯಾಯಾಧೀಶರ ನ್ಯಾಯಪೀಠ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನೇತೃತ್ವದಲ್ಲಿ ಬ್ಯಾನರ್ಜಿ ಹಾಗೂ ಘಟಕ್ ಅವರು ಸಲ್ಲಿಸಿದ ಅಫಿಡವಿಟ್ಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು.
ಬ್ಯಾನರ್ಜಿ ಅವರು ಜೂನ್ 21 ರಂದು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದರು.
0 التعليقات: