ಬೆಂಗಳೂರಿನಲ್ಲಿ ಅನುಮಾನಾಸ್ಪದ ಸೂಟ್ಕೇಸ್ : ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ
ಬೆಂಗಳೂರು: ಇಲ್ಲಿನ ಮಲ್ಲೇಶ್ವರದಲ್ಲಿ ಅನುಮಾನಾಸ್ಪದ ಸೂಟ್ಕೇಸ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸೋಮವಾರ ಪರಿಶೀಲನೆ ನಡೆಸಿದರು.
ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 15ನೆ ಕ್ರಾಸ್ನ ಪಾದಚಾರಿ ರಸ್ತೆಯಲ್ಲಿ ಸೂಟ್ಕೇಸ್ ಕಂಡಿತ್ತು. ಅದನ್ನು ನೋಡಿದ್ದ ಸ್ಥಳೀಯರು, ಸೂಟ್ಕೇಸ್ನಲ್ಲಿ ಬಾಂಬ್ ಇರಬಹುದು ಎಂದು ಶಂಕಿಸಿ ಅನುಮಾನಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರು, ಸೂಟ್ಕೇಸ್ ಇದ್ದ ಜಾಗದಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಿದ್ದರು. ನಂತರ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು. ಸೂಟ್ಕೇಸ್ ತೆರೆದಾಗ ಬಟ್ಟೆಗಳು ಮಾತ್ರ ಇದ್ದವು ಎಂದು ತಿಳಿದುಬಂದಿದೆ.
'ಸೂಟ್ಕೇಸ್ನಲ್ಲಿ ಸ್ಫೋಟಕ ವಸ್ತು ಇರುವ ಆತಂಕವಿತ್ತು. ಪರಿಶೀಲಿಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಇರಲಿಲ್ಲ. ಬಟ್ಟೆಗಳು ಮಾತ್ರ ಇದ್ದವು' ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
0 التعليقات: