Tuesday, 8 June 2021

ಮನೆ ಮನೆ ಸಮೀಕ್ಷೆ, ಬೂತ್ ಮಟ್ಟದಲ್ಲಿ ಲಸಿಕೀಕರಣ: ಅರವಿಂದ್ ಕೇಜ್ರೀವಾಲ್ ಚಾಲನೆ


ಮನೆ ಮನೆ ಸಮೀಕ್ಷೆ, ಬೂತ್ ಮಟ್ಟದಲ್ಲಿ ಲಸಿಕೀಕರಣ: ಅರವಿಂದ್ ಕೇಜ್ರೀವಾಲ್ ಚಾಲನೆ

ಹೊಸದಿಲ್ಲಿ, ಜೂ.7: ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಉಂಟಾಗುವ ಜನಸಂದಣಿಯನ್ನು ನಿವಾರಿಸಲು ರೂಪಿಸಲಾದ 45 ವರ್ಷಕ್ಕಿಂತ ಅಧಿಕ ವರ್ಷದವರಿಗೆ ಅವರ ಮತದಾನ ಕೇಂದ್ರದಲ್ಲೇ ಲಸಿಕೆ ಹಾಕುವ ಅಭಿಯಾನ ಮತ್ತು ಈ ಕುರಿತ ಮನೆಮನೆ ಸಮೀಕ್ಷೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಸೋಮವಾರ ಚಾಲನೆ ನೀಡಿದ್ದಾರೆ. 

ಲಸಿಕೆಯ ಕೊರತೆಯಾಗದಿದ್ದರೆ ದಿಲ್ಲಿ ನಗರದಲ್ಲಿರುವ 45 ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ  ಜನರಿಗೂ 4 ವಾರದೊಳಗೆ ಲಸಿಕೆ ಹಾಕಲಾಗುವುದು ಎಂದವರು ಘೋಷಿಸಿದ್ದಾರೆ. ದಿಲ್ಲಿ ನಗರದಲ್ಲಿ 45 ವರ್ಷ ಮೀರಿದ 57 ಲಕ್ಷ ಜನರಿದ್ದು ಇವರಲ್ಲಿ 27 ಲಕ್ಷ ಜನತೆ ಪ್ರಥಮ ಲಸಿಕೆ ಪಡೆದಿದ್ದಾರೆ. ಮತದಾನ ಕೇಂದ್ರ ಮಟ್ಟದ ಅಧಿಕಾರಿಗಳ ಪಟ್ಟಿ ತಯಾರಿಸಲಾಗಿದ್ದು ಇವರು ಪ್ರತೀ ಮನೆಗೂ ತೆರಳಿ, 45 ವರ್ಷ ಮೀರಿದವರಿಗೆ ಲಸಿಕೆ ಹಾಕಲು ಸಮಯ ನಿಗದಿಗೊಳಿಸುತ್ತಾರೆ. ಈ ಯೋಜನೆ ದಿಲ್ಲಿಯ 70 ವಾರ್ಡ್ಗಳಲ್ಲಿ ಮಂಗಳವಾರದಿಂದ ಜಾರಿಗೆ ಬರಲಿದೆ. 

ದಿಲ್ಲಿಯಲ್ಲಿ ಸುಮಾರು 780 ವಾರ್ಡ್ಗಳಿದ್ದು ಪ್ರತೀ ವಾರ 70 ವಾರ್ಡ್ಗಳಲ್ಲಿ ಲಸಿಕೀಕರಣ ನಡೆಯಲಿದೆ. ಮನೆಯಿಂದ ಕಾಲ್ನಡಿಗೆಯ ದೂರದಲ್ಲಿರುವ ಮತದಾನ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕೇಜ್ರಿವಾಲ್ ವಿನಂತಿಸಿದ್ದಾರೆ. 

ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುವವರ ಮನವೊಲಿಸಲಾಗುವುದು. ಇದಕ್ಕೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ತೆರಳುವಾಗ ಇ-ರಿಕ್ಷಾಗಳ ಸೇವೆ ಬಳಸಿಕೊಳ್ಳಬಹುದು. ಲಸಿಕೆಯ ಕೊರತೆಯಾಗದಿದ್ದರೆ  ಇದೇ ಮಾದರಿಯನ್ನು 18-44 ವಯೋಮಾನದ ವಿಭಾಗಕ್ಕೂ ಅನ್ವಯಿಸಲಾಗುವುದು ಎಂದವರು ಹೇಳಿದ್ದಾರೆ. 


SHARE THIS

Author:

0 التعليقات: