Wednesday, 2 June 2021

ಮೂಡಿಗೆರೆ ಮಿನಿ ವಿಧಾನಸೌಧದ ಒಳಾಂಗಣದಲ್ಲಿ ದೇವಾಲಯ ನಿರ್ಮಾಣ: ಸಾರ್ವಜನಿಕರು, ಸಂಘ ಸಂಸ್ಥೆಗಳ ವಿರೋಧ


ಮೂಡಿಗೆರೆ ಮಿನಿ ವಿಧಾನಸೌಧದ ಒಳಾಂಗಣದಲ್ಲಿ ದೇವಾಲಯ ನಿರ್ಮಾಣ: ಸಾರ್ವಜನಿಕರು, ಸಂಘ ಸಂಸ್ಥೆಗಳ ವಿರೋಧ

ಮೂಡಿಗೆರೆ, ಜೂ.2: ಪಟ್ಟಣದ ತಾಲೂಕು ಕಚೇರಿಯ ಒಳಾಂಗಣದಲ್ಲಿ ದೇವಾಲಯವೊಂದನ್ನು ನಿರ್ಮಿಸಲಾಗುತ್ತಿದ್ದು, ತಾಲೂಕು ಆಡಳಿತದ ಈ ನಿಲುವಿನ ವಿರುದ್ಧ ಸಂಘ ಸಂಸ್ಥೆಗಳು, ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಬೇಲೂರು ರಸ್ತೆಯಲ್ಲಿ ಮಿನಿವಿಧಾನಸೌಧದ ಕಟ್ಟಡವಿದ್ದು, ಈ ಕಟ್ಟಡದ ಒಳಾಂಗಣದಲ್ಲಿ ಆಂಜನೇಯ ಸ್ವಾಮಿಯ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಸರಕಾರಿ ಕಟ್ಟಡದ ಒಳಾಂಗಣದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಗುಡಿಯನ್ನು ನಿರ್ಮಿಸುತ್ತಿರುವುದು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ನಿಲುವಾಗಿದ್ದು, ತಾಲೂಕು ಆಡಳಿತ ಕೂಡಲೇ ಈ ದೇವಾಲಯ ನಿರ್ಮಾಣದ ಯೋಜನೆಯನ್ನು ಕೈಬಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ದೇವಾಲಯ ನಿರ್ಮಾಣ ಸಂಬಂಧ ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಿನಿವಿಧಾನಸೌಧ ಸರಕಾರದ ಆಡಳಿತ ವ್ಯವಸ್ಥೆಯ ಭಾಗವಾಗಿದೆ. ತಾಲೂಕು ಕಚೇರಿ ಯಾವುದೇ ವ್ಯಕ್ತಿಯ, ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ಆಸ್ತಿಯಲ್ಲ. ಅದರ ಮೇಲೆ ಎಲ್ಲ ಧರ್ಮದವರ ಹಕ್ಕಿದೆ. ಸರಕಾರಿ ಕಟ್ಟಡಗಳು ಸಾರ್ವಜನಿಕರಿಗೆ ಸೇವೆ ನೀಡುವ ಕೇಂದ್ರಗಳಾಗಿದ್ದು, ಇಂತಹ ಕಟ್ಟಡಗಳ ಆವರಣದಲ್ಲಿ ದೇವಾಲಯ ನಿರ್ಮಾಣದಂತಹ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮುಂದೆ ಇದೇ ಕಟ್ಟಡದ ಆವರಣದಲ್ಲಿ ಮಸೀದಿ, ಚರ್ಚು ನಿರ್ಮಿಸಿ ಎಂದು ಸಾರ್ವಜನಿಕರು ಬೇಡಿಕೆ ಇಟ್ಟಲ್ಲಿ ತಾಲೂಕು ಆಡಳಿತ ಇದನ್ನು ಈಡೇರಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಸಕ್ತ ಇಡೀ ದೇಶದ ಜನರು ಕೊರೋನ ಸೋಂಕಿನಿಂದಾಗಿ ಸಂಕಷ್ಟದ ದಿನಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿರುವ ದೇವಾಲಯ ನಿರ್ಮಾಣದ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಿರುವುದು ಸರಿಯಲ್ಲ. ಸರಕಾರದ ಕೆಲಸ ದೇವರ ಕೆಲಸ ಎನ್ನಲಾಗುತ್ತದೆ. ಅಂದರೆ ಸರಕಾರಿ ಕಚೇರಿಗಳು ಸಾರ್ವಜನಿಕರಿಗೆ ಸೇವೆ ನೀಡುವ ಕೇಂದ್ರಗಳಾಗಿದ್ದು, ಸರಕಾರಿ ಕಚೇರಿಯೇ ದೇವಾಲಯಗಳಾಗಿವೆ. ಇಂತಹ ಸಂದರ್ಭದಲ್ಲಿ ಸರಕಾರಿ ಕಚೇರಿಯ ಒಳಗೆ ಗುಡಿ ನಿರ್ಮಿಸುವ ಯೋಜನೆ ಯಾರದ್ದು ಎಂಬುದನ್ನು ತಾಲೂಕು ಆಡಳಿತ ಸ್ಪಷ್ಟನೆ ನೀಡಬೇಕೆಂದು ಎಂ.ಎಸ್.ಅನಂತ್ ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅತಿವೃಷ್ಟಿ ಸಂಭವಿಸಿ ನೂರಾರು ಕುಟುಂಬಗಳು ನೆಲೆ ಕಳೆದುಕೊಂಡು ಬೀದಿ ಪಾಲಾಗಿವೆ. ಇಂತಹ ಕುಟುಂಬಗಳಿಗೆ ತಾಲೂಕು ಆಡಳಿತ ನೆಲೆ ಕಲ್ಪಿಸಿಕೊಡುವಲ್ಲಿ ಎಷ್ಟರ ಮಟ್ಟಿಗೆ ತನ್ನ ಕರ್ತವ್ಯ ನಿರ್ವಹಿಸಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಾಲೂಕಿನಾದ್ಯಂತ ನೂರಾರು ಸಣ್ಣ ಕೃಷಿಕರು ಸಾಗುವಳಿ ಚೀಟಿಗಾಗಿ ಕಳೆದ 10 ವರ್ಷಗಳಿಂದ ಅಲೆದಾಡುತ್ತಿದ್ದರೂ ಅವರಿಗೆ ತಾಲೂಕು ಆಡಳಿತ ನ್ಯಾಯ ನೀಡಿಲ್ಲ. ಈ ಪಾಪದ ಪ್ರಾಯಶ್ಚಿತ್ತಕ್ಕಾಗಿ ತಾಲೂಕು ಕಚೇರಿ ಒಳಗೆ ದೇವಾಲಯ ನಿರ್ಮಾಣಕ್ಕೆ ತಾಲೂಕು ಆಡಳಿತ ಮುಂದಾದಂತಿದೆ ಎಂದು ಟೀಕಿಸಿರುವ ಅವರು, ಕಚೇರಿ ಆವರಣದಲ್ಲಿ ಸಮಾಜಕ್ಕೆ ಬೆಳಕು ತೋರಿರುವ ಸಮಾಜ ಸುಧಾರಕರ ಮೂರ್ತಿ ನಿರ್ಮಿಸಲಿ, ಕಾರಂಜಿ ನಿರ್ಮಿಸಿ ಕಚೇರಿಯ ಸೌಂದರ್ಯ ಹೆಚ್ಚಿಸಲಿ. ಅದನ್ನು ಬಿಟ್ಟು ಯಾರದೋ ಅಣತಿ ಮೇರೆಗೆ ಏಕಪಕ್ಷೀಯವಾಗಿ ತಾಲೂಕು ಆಡಳಿತ ಗುಡಿ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ. ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪಟ್ಟಣ ಪಂಚಾಯತ್ ಸದಸ್ಯ ಹೊಸಕೆರೆ ರಮೇಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಆನೆ ನಡೆದದ್ದೇ ದಾರಿ ಎಂಬಂತಾಗಿದೆ. ಮುಜರಾಯಿ ಇಲಾಖೆಯಡಿ ಬರುವ ಅನೇಕ ದೇವಾಲಯಗಳು ಜೀರ್ಣೋದ್ಧಾರ ಕಾಣದೇ ಶಿಥಿಲಾವಸ್ಥೆಯಲ್ಲಿವೆ. ತಾಲೂಕು ಆಡಳಿತಕ್ಕೆ ನೈತಿಕತೆ ಇದ್ದಲ್ಲಿ ಮೊದಲು ಸರಕಾರದ ಈ ದೇವಲಾಯಗಳನ್ನು ಜೀರ್ಣೋದ್ಧಾರ ಮಾಡಲಿ. ಅದನ್ನು ಜನರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರಿ ಕಚೇರಿಯಲ್ಲಿ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಗುಡಿ ನಿರ್ಮಿಸುವುದು ಸರಕಾರವೇ ಧಾರ್ಮಿಕ ತಾರತಮ್ಯದ ಪರಮಾವಧಿಯಾಗಿದೆ. ಇದು ಸಂವಿಧಾನದ ಆಶಗಳಿಗೆ ವಿರುದ್ಧವಾದ ನಡೆಯಾಗಿದ್ದು, ಕೂಡಲೇ ಗುಡಿ ನಿರ್ಮಾಣದ ಅಪ್ರಸ್ತುತ ನಿರ್ಧಾರವನ್ನು  ಕೈಬಿಟ್ಟು, ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕೆಂದು ಒತ್ತಾಯಿಸಿದ್ದಾರೆ.


SHARE THIS

Author:

0 التعليقات: