Wednesday, 2 June 2021

ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ: ಮತ್ತೊಬ್ಬ ಆರೋಪಿ ಕಾಲಿಗೆ ಗುಂಡು

ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ: ಮತ್ತೊಬ್ಬ ಆರೋಪಿ ಕಾಲಿಗೆ ಗುಂಡು

ಬೆಂಗಳೂರು: ಬಾಂಗ್ಲಾ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಶೂಬೂಜ್ (30) ಬಂಧಿತ ಆರೋಪಿ.‌ 'ಈತನೂ ಅತ್ಯಾಚಾರ ಸಂತ್ರಸ್ತೆಯ ಮೇಲೆ ವಿಕೃತಿ ಮೆರೆದಿದ್ದ. ಘಟನೆ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ' ಎಂದು ಪೊಲೀಸರು ತಿಳಿಸಿದರು.

'ಆವಲಹಳ್ಳಿ ಸಮೀಪದ ರಾಂಪುರ ಕೆರೆಯ ಬಳಿ ಕಸ ಆಯುವವರ ಶೆಡ್‌ನಲ್ಲಿ ಶೂಬೂಜ್ ತಂಗಿದ್ದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಆರೋಪಿಯನ್ನು ಬಂಧಿಸಿ ಜೀಪ್‌ನಲ್ಲಿ ಕರೆತರುತ್ತಿದ್ದಾಗ, ತುರ್ತಾಗಿ ಮೂತ್ರ ವಿಸರ್ಜನೆ ಮಾಡಬೇಕೆಂದು ಕೇಳಿಕೊಂಡಿದ್ದ. ಈ ವೇಳೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ'.

'ಶರಣಾಗುವಂತೆ ಪೊಲೀಸರು ತಿಳಿಸಿದರೂ ಒಪ್ಪದ ಶೂಬೂಜ್, ತಪ್ಪಿಸಿಕೊಳ್ಳಲು ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ. ಇದರಿಂದ ಪಿಎಸ್‌ಐ ಶಿವರಾಜ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ದೇವೇಂದ್ರ ನಾಯಕ್‌ ಗಾಯಗೊಂಡರು. ಕೊನೆಗೆ ಪರಾರಿಯಾಗುತ್ತಿದ್ದ ವೇಳೆ ಪಿಎಸ್‌ಐ ಶಿವರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು' ಎಂದು ಮಾಹಿತಿ ನೀಡಿದರು.


SHARE THIS

Author:

0 التعليقات: