Friday, 11 June 2021

ಸಕಲೇಶಪುರ: ಅಡ್ಡಾಡುತ್ತಿದ್ದ ಎರಡು ಕಾಡಾನೆಗಳ ಸೆರೆ 5 ಆನೆಗಳ ಸಹಾಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ


ಸಕಲೇಶಪುರ:  ಅಡ್ಡಾಡುತ್ತಿದ್ದ ಎರಡು ಕಾಡಾನೆಗಳ ಸೆರೆ

5 ಆನೆಗಳ ಸಹಾಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ

ಸಕಲೇಶಪುರ, ಜೂ.11: ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯುವ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ತಾಲೂಕಿನ ಹಳೆಕೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ಅಡ್ಡಾಡುತ್ತಿದ್ದ ಎರಡು ಗಂಡು ಆನೆಗಳನ್ನು ಹಿಡಿದು ಅಭಯಾರಣ್ಯಕ್ಕೆ ಬಿಡಲಾಯಿತು.

ಸೆರೆ ಹಿಡಿದ ಆನೆಗಳಿಗೂ ಹೆಸರಿಡಲಾಗಿದ್ದು, ಒಂದಕ್ಕೆ ಮೌಂಟೈನ್ ಹಾಗೂ ಇನ್ನೊಂದಕ್ಕೆ ಗುಂಡ ಎಂದು ಹೆಸರಿಸಲಾಗಿದೆ.

ಅರ್ಜುನ, ಅಭಿಮನ್ಯು, ಭೀಮ, ಗಣೇಶ, ಮಹೇಂದ್ರ ಎಂಬ ಕುಮ್ಕಿ ಆನೆಗಳ ಸಹಾಯದಿಂದ ಈ 2 ಕಾಡಾನೆಗಳನ್ನು ಸೆರೆಹಿಡಿಯಲಾಯಿತು.

ಗುರುವಾರ ಬೆಳಗ್ಗೆ 8:30ರ ಸುಮಾರಿಗೆ ಹಳೆಕೆರೆ ಗ್ರಾಮದ ತೋಟದಲ್ಲಿ ಮೌಂಟೈನ್ ಒಂಟಿ ಸಲಗ ಪತ್ತೆಯಾಯಿತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು ನೇತೃತ್ವದಲ್ಲಿ  ದಲಾಯತ್ ಅಕ್ರಂ, ಡಾ.ಮುಜೀಬ್, ಡಾ. ಮುರಳಿ, ಡಾ.ಆಶೀಸ್ ರನ್ನು ಒಳಗೊಂಡ ತಂಡ ಈ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿತು. ಮಧ್ಯಾಹ್ನ 1:30ರ ಸುಮಾರಿಗೆ ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿ ಇದನ್ನು ಸೆರೆಹಿಡಿಯುವಲ್ಲಿ ತಂಡವು ಯಶಸ್ವಿಯಾಯಿತು.

ಈ ಕಾರ್ಯಾಚರಣೆ ನಡೆಯುತ್ತಿದ್ದಂತೆ ಅಲ್ಲೇ ಸಮೀಪದಲ್ಲೆ ಗುಂಡ ಆನೆ ಅಡ್ಡಾಡುತ್ತಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಮೌಂಟೈನ್ ಸೆರೆಹಿಡಿದ ಬಳಿಕ ಎರಡನೇ ಆನೆ ಸೆರೆ ಕಾರ್ಯಾಚರಣೆಗೆ ಅಧಿಕಾರಿ, ಸಿಬ್ಬಂದಿ ಇಳಿದರು. ಕೇವಲ 15 ನಿಮಿಷಗಳಲ್ಲಿ ಗುಂಡನಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಅಭಯಾರಣ್ಯಕ್ಕೆ ಸ್ಥಳಾಂತರ: ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಭಯಾರಣ್ಯಕ್ಕೆ ಬಿಡಲಾಗುವುದು, ಯಾವ ಅರಣ್ಯ ಎಂಬುದು ಇನ್ನೂ ನಿರ್ಧಾರ ಆಗಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್.ಬಸಬರಾಜು ಹೇಳಿದರು.

ಕಾರ್ಯಾಚರಣೆಗೂ ಮೊದಲು ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಹಾಗೆಯೇ ಎಲ್ಲರಿಗೂ ಕೋವಿಡ್ ಪರೀಕ್ಷೆ ಸಹ ನಡೆಸಿದ ನಂತರವೇ ಕಾರ್ಯಾಚರಣೆ ನಡೆಸಲಾಯಿತು ಎಂದರು. 

ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್, ಎಸಿಎಫ್ ಲಿಂಗರಾಜು, ತಹಶೀಲ್ದಾರ್ ಎಚ್.ಬಿ. ಜೈಕುಮಾರ್, ಡಿವೈಎಸ್ಪಿ ಬಿ.ಆರ್. ಗೋಪಿ ಯಸಳೂರು, ಆರ್‌ಎಫ್‌ಓ ಮೋಹನ್, ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ, ಅರಕಲಗೂಡು ಆರ್‌ಎಫ್‌ಓ ಅರುಣ್, ಆಲೂರು ಆರ್ ಎಫ್ ಓ ವಿನಯ್‌ಚಂದ್ರ, ಡಾ. ಮುಜೀಬ್, ಡಾ. ಮುರುಳಿ, ಭದ್ರಾ ಅರಣ್ಯ ವನ್ಯ ಜೀವಿ ವಿಭಾಗದ ಡಾ. ಯಶಸ್ಸ್ ಹಾಗೂ ಸಿಬ್ಬಂದಿ ಇದ್ದರು.


SHARE THIS

Author:

0 التعليقات: