ಜುಲೈ 3ನೇ ವಾರದಲ್ಲಿ ಎಸೆಸೆಲ್ಸಿ ಪರೀಕ್ಷೆ: ಸುರೇಶ್ ಕುಮಾರ್
ಬೆಂಗಳೂರು, ಜೂ.4: ರಾಜ್ಯದಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆಗಳು ಇರಲಿದ್ದು, ಜುಲೈ 3ನೇ ವಾರದಲ್ಲಿ ನಡೆಯಲಿದೆ. ಪರೀಕ್ಷೆಯು ಎರಡು ದಿನಗಳಿಗೆ ಸೀಮಿತವಾಗಿರುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಸಚಿವರು, ಪರೀಕ್ಷೆ ದಿನಾಂಕವನ್ನು ಪರೀಕ್ಷೆಗಿಂತ 20 ದಿನಗಳ ಮೊದಲೇ ಪ್ರಕಟಿಸಲಾಗವುದು. ಎರಡು ಹಂತದಲ್ಲಿ ಬಹು ಆಯ್ಕೆಯ ಪ್ರಶ್ನೆಪತ್ರಿಕೆಗಳ ಮೂಲಕ ಪರೀಕ್ಷೆ ನಡೆಸಲಾಗುವುದು. ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಿಗೆ ಒಂದು ಪರೀಕ್ಷೆ ಹಾಗೂ ಐಚ್ಛಿಕ ವಿಷಯಗಳಿಗೆ ಇನ್ನೊಂದು ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಫಲಿತಾಂಶವನ್ನು ಗ್ರೇಡಿಂಗ್ ಆಧಾರದಲ್ಲಿ ನೀಡಲಾಗುವುದು. ಆದರೆ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದವರು ತಿಳಿಸಿದ್ದಾರೆ.
ಪರೀಕ್ಷಾ ಫಲಿತಾಂಶವು ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರ ಪ್ರಕಟಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯಾದ್ಯಂತ ಆರು ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಂದು ಡೆಸ್ಕ್ ನಲ್ಲಿ ಓರ್ವ ವಿದ್ಯಾರ್ಥಿಯಂತೆ ಪ್ರತೀ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಪರೀಕ್ಷಾರ್ಥಿಗಳಿಗೆ N-95 ಮಾಸ್ಕ್ ನೀಡಲಾಗುವುದು. ಪರೀಕ್ಷೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ವ್ಯವಸ್ಥೆ ಮಾಡುತ್ತೇವೆ. ಅದೇರೀತಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೂ ಕಡ್ಡಾಯ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
0 التعليقات: