200 ಕೆ.ಜಿ. ಗಾಂಜಾ ನಾಶ
ಹಾವೇರಿ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ 2011ರಿಂದ ಜಪ್ತಿ ಮಾಡಿದ್ದ 200 ಕೆ.ಜಿ ಮಾದಕ ವಸ್ತುಗಳನ್ನು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಕೇಂದ್ರದಲ್ಲಿ ಶನಿವಾರ ನಾಶಪಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿಲೇವಾರಿ ಸಮಿತಿ ಸಮ್ಮುಖದಲ್ಲಿ 20 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ 200 ಕೆ.ಜಿ. ಗಾಂಜಾವನ್ನು ನಾಶಪಡಿಸಲಾಯಿತು.
'ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕ ವಸ್ತುಗಳ ಆಮಿಷಕ್ಕೆ ಯಾರೂ ಬಲಿಯಾಗಬಾರದು. ಮಾದಕ ವಸ್ತುಗಳ ಮಾರಾಟದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ. ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಗೃಹ ಸಚಿವರ ಸೂಚನೆಯಂತೆ ಈ ಕೃತ್ಯಗಳನ್ನು ಮೂಲೋತ್ಪಾಟನೆ ಮಾಡಲು ಹಾಗೂ ಈ ಪಿಡುಗಿಗೆ ಒಳಗಾಗುವ ಯುವಜನರನ್ನು ರಕ್ಷಿಸಲು ನಾವು ಸದಾ ಸಿದ್ಧವಿದ್ದೇವೆ' ಎಂದು ಎಸ್ಪಿ ಹನುಮಂತರಾಯ 'ಪ್ರಜಾವಾಣಿ'ಗೆ ತಿಳಿಸಿದರು.
ಡಿವೈಎಸ್ಪಿಗಳಾದ ಶಂಕರ ಮಾರಿಹಾಳ, ಟಿ.ವಿ.ಸುರೇಶ, ಡಿಸಿಆರ್ಬಿ ಡಿವೈಎಸ್ಪಿ ಎಂ.ಎಸ್.ಪಾಟೀಲ ಹಾಗೂ ಸಿಬ್ಬಂದಿ ವರ್ಗ ಇದ್ದರು.
0 التعليقات: