Sunday, 6 June 2021

ಉತ್ತರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಇಳಿಕೆ

ಉತ್ತರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಇಳಿಕೆ

ಹೊಸದಿಲ್ಲಿ : ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ಇಳಿಕೆ ಪ್ರವೃತ್ತಿ ಮುಂದುವರಿದಿರುವ ನಡುವೆಯೇ ಇಳಿಕೆಯ ವೇಗದಲ್ಲಿ ಉತ್ತರ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಸ್ಪಷ್ಟ ವ್ಯತ್ಯಾಸ ಇರುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

ದಕ್ಷಿಣ ರಾಜ್ಯಗಳು ಮತ್ತು ಮಹಾರಾಷ್ಟ್ರಕ್ಕೆ ಹೋಲಿಸಿದರೆ ಉತ್ತರ ರಾಜ್ಯಗಳಲ್ಲಿ ದುಪ್ಪಟ್ಟು ವೇಗದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ.

ಮೇ 9ರಂದು ಉತ್ತುಂಗ ತಲುಪಿದ ಬಳಿಕ ಜೂನ್ 3ರ ವರೆಗೆ ಹರ್ಯಾಣದಲ್ಲಿ ಏಳು ದಿನಗಳ ದೈನಿಕ ಸರಾಸರಿ 8.9% ಇಳಿಕೆಯಾಗಿದ್ದು, ದೇಶದ 18 ದೊಡ್ಡ ರಾಜ್ಯಗಳ ಪೈಕಿ ಅತ್ಯಂತ ತ್ವರಿತವಾಗಿ ಇಲ್ಲಿ ಪ್ರಕರಣಗಳು ಇಳಿಕೆಯಾಗಿವೆ. ರಾಜಸ್ಥಾನ (8.5%), ದೆಹಲಿ (8.2), ಬಿಹಾರ (8.1), ಉತ್ತರ ಪ್ರದೇಶ (7.8) ಮತ್ತು ಉತ್ತರಾಖಂಡ (7.6) ರಾಜ್ಯಗಳಲ್ಲೂ ವೇಗವಾಗಿ ಪ್ರಕರಣಗಳು ಇಳಿಕೆಯಾಗಿವೆ.

ಆದರೆ ದಕ್ಷಿಣ ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ ನಿಧಾನವಾಗಿ ಸೋಂಕಿತರ ಸಂಖ್ಯೆ ಇಳಿಯುತ್ತಿದೆ. ತಮಿಳುನಾಡಿನಲ್ಲಿ ಈ ಪ್ರಮಾಣ 2.7% ಇದ್ದರೆ ಆಂಧ್ರದಲ್ಲಿ 4.2%ರ ದರದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ. ದೇಶಾದ್ಯಂತ ಮೇ 8ರಂದು ಗರಿಷ್ಠ ಪ್ರಕರಣಗಳು ದಾಖಲಾದ ಬಳಿಕ 3.7% ದರದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ.

ಆದರೆ ಪ್ರಕರಣಗಳ ವರದಿ ಮಾಡುವ ವ್ಯವಸ್ಥೆಯಲ್ಲಿರುವ ವ್ಯತ್ಯಾಸ ಈ ಅಗಾಧ ಅಂತರಕ್ಕೆ ಕಾರಣವಿರಬಹುದು ಎಂದು ವೈರಾಣು ತಜ್ಞ ಗಗನದೀಪ್ ಕಂಗ್ ಅಭಿಪ್ರಾಯಪಡುತ್ತಾರೆ. ನಿಶ್ಚಿತವಾಗಿಯೂ ಆರೋಗ್ಯ ವ್ಯವಸ್ಥೆ ಉತ್ತಮವಾಗಿರುವ ದಕ್ಷಿಣ ಭಾರತದಲ್ಲಿ ವರದಿ ವ್ಯವಸ್ಥೆಯೂ ಉತ್ತಮ ಇದೆ ಎನ್ನುವುದು ಅವರ ವಿಶ್ಲೇಷಣೆ.


 


SHARE THIS

Author:

0 التعليقات: