Saturday, 8 May 2021

ಬಿಜೆಪಿ ಸಂಸದನ ಪತ್ರದ ಬೆನ್ನಲ್ಲೇ ಉತ್ತರಪ್ರದೇಶ ಶಾಸಕನಿಂದ ಆಕ್ಸಿಜನ್‌ ಕೊರತೆ ಕುರಿತು ಸಿಎಂ ಆದಿತ್ಯನಾಥ್‌ ಗೆ ಪತ್ರ


 ಬಿಜೆಪಿ ಸಂಸದನ ಪತ್ರದ ಬೆನ್ನಲ್ಲೇ ಉತ್ತರಪ್ರದೇಶ ಶಾಸಕನಿಂದ ಆಕ್ಸಿಜನ್‌ ಕೊರತೆ ಕುರಿತು ಸಿಎಂ ಆದಿತ್ಯನಾಥ್‌ ಗೆ ಪತ್ರ

ಲಕ್ನೋ : ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಆಕ್ಸಿಜನ್ ಕೊರತೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಮೊಹಮದಿ ಕ್ಷೇತ್ರದ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ಅವರು ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ. 

ರಾಜ್ಯದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ಹಾಗೂ ಇತರ ವೈದ್ಯಕೀಯ ಅಗತ್ಯತೆಗಳ ಕೊರತೆ ಕುರಿತಂತೆ ಈಗಾಗಲೇ ಹಲವು ಬಿಜೆಪಿ ಶಾಸಕರು ಹಾಗೂ ನಾಯಕರು ದೂರಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ಬಿಜೆಪಿಯ ಕಾನ್ಪುರ್  ಸಂಸದ ಸತ್ಯದೇವ್ ಪಚೌರಿ ಕೂಡ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಪತ್ರ ಬರೆದು ಸೂಕ್ತ ಸಮಯದಲ್ಲಿ ಆಕ್ಸಿಜನ್ ಹಾಗೂ ಚಿಕಿತ್ಸೆ ದೊರೆಯದೆ ಹಲವು  ಜೀವಗಳು ಬಲಿಯಾಗಿರುವ ಕುರಿತಂತೆ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ನಡುವೆ  ಲೋಕೇಂದ್ರ ಪ್ರತಾಪ್ ಸಿಂಗ್ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಕ್ಷೇತ್ರ ಹಾಗೂ ಲಖೀಂಪುರ್ ಖಿರಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಗುತ್ತಿದ್ದು ಹಾಗೂ ಹಲವು ಸಮಾಜ ಸೇವಕರು, ಪತ್ರಕರ್ತರು, ರಾಜಕಾರಣಿಗಳು, ಶಿಕ್ಷಕರು, ಸರಕಾರಿ ಉದ್ಯೋಗಿಗಳು ಹಾಗೂ ವಕೀಲರುಗಳು ಸಹಾಯಕ್ಕಾಗಿ ತಮಗೆ ಮನವಿ ಮಾಡಿದ್ದರೂ ಅವರ ಜೀವವುಳಿಸಲು ತಮಗೆ ಸಾಧ್ಯವಾಗಿಲ್ಲ ಎಂದು  ಅವರು ಪತ್ರದಲ್ಲಿ ವಿವರಿಸಿದ್ದಾರೆ. ಸರಕಾರ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದರೂ ಆಕ್ಸಿಜನ್ ಕೊರತೆಯಿಂದಾಗಿ  ಜಿಲ್ಲಾಡಳಿತದ ಕೈಕಟ್ಟಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.

ಸೂಕ್ತ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಕೇಂದ್ರ ಸರಕಾರ 400 ಮೆಟ್ರಿಕ್ ಟನ್ ಆಕ್ಸಿಜನ್  ಮಂಜೂರುಗೊಳಿಸಿದೆ ಹಾಗೂ ರಿಲಯನ್ಸ್ ಮತ್ತು ಅದಾನಿ ಸಮೂಹ ಕೂಡ ಆಕ್ಸಿಜನ್ ಟ್ಯಾಂಕರ್‍ಗಳನ್ನು ಲಭ್ಯಗೊಳಿಸಿದೆ, ವಿವಿಧ ಜಿಲ್ಲೆಗಳಿಗೆ 89 ಟ್ಯಾಂಕರ್‍ಗಳನ್ನು ಒದಗಿಸಲಾಗಿದೆ ಎಂದು ಸರಕಾರ ಹೇಳಿದೆ.


SHARE THIS

Author:

0 التعليقات: