ಈ ಸಾವುಗಳಿಗೆ ಯಾರು ಹೊಣೆ? ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ: ಡಿಕೆಶಿ
ಬೆಂಗಳೂರು, ಮೇ 3: ಆಕ್ಸಿಜನ್ ಕೊರತೆಯಿಂದ ಸಂಭವಿಸಿದ 24 ಜನರ ಸಾವಿಗೆ ಹೊಣೆ ಯಾರು? ಇವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಹೇಗೆ ಧೈರ್ಯ ತುಂಬಬೇಕು ಎಂಬುದೇ ತೋಚುತ್ತಿಲ್ಲ. ಈ ಸರ್ಕಾರ ನಂಬಿಕೆ ಕಳೆದುಕೊಂಡಿದ್ದು, ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಮಾಡಿಕೊಳ್ಳುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಪ್ರಚಾರ ಪ್ರಿಯ ಸರ್ಕಾರ. ಆಕ್ಸಿಜನ್ ವಿಚಾರದಲ್ಲಿ ಯಾರೂ ಮೇಲ್ವಿಚಾರಣೆ ಮಾಡುತ್ತಿಲ್ಲ. ಈ ಸರ್ಕಾರದಿಂದಾಗಲಿ ಮುಖ್ಯಮಂತ್ರಿಗಳಿಂದಾಗಲಿ, ಮಂತ್ರಿಗಳಿಂದಾಗಲಿ ಈ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಅವರ ಆದ್ಯತೆಗಳೇ ಬೇರೆ. ನಮ್ಮ ಮರ್ಯಾದೆ ಹೋದರೂ ಪರವಾಗಿಲ್ಲ, ಶಾಸಕಾಂಗ ಪಕ್ಷದ ಸಭೆ ನಂತರ ನಾನೇ ಮುಖ್ಯಕಾರ್ಯದರ್ಶಿಗಳ ಸಮಾಯಾವಕಾಶ ಕೇಳಿ ಅವರು ಎಲ್ಲಿರುತ್ತಾರೋ ಅಲ್ಲಿಗೇ ಹೋಗಿ ಭೇಟಿ ಮಾಡಿ ಈ ರಾಜ್ಯದ ಜನತೆಗೆ ವಾಸ್ತವಾಂಶ ಏನಿದೆ ಎಂದು ತಿಳಿಸಲು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನನಗೆ ಬರುತ್ತಿರುವ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವರನ್ನು ಎಲ್ಲಿಗೆ ಕಳುಹಿಸಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದು ತೋಚುತ್ತಿಲ್ಲ. ಜನ ಆಕ್ಸಿಜನ್ ಮಟ್ಟದ ಕುಸಿತದಿಂದ ಆತಂಕಕ್ಕೆ ಸಿಲುಕಿದ್ದಾರೆ. ನಮಗೆ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಬದ್ಧತೆ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಜನರಿಗೆ ವಾಸ್ತವಾಂಶವನ್ನು ನೀವಾದರೂ ತಿಳಿಸಿ. ತಜ್ಞರು ಎಂದು ಇಟ್ಟುಕೊಂಡಿರುವವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದು ಒತ್ತಾಯಿಸಿದರು
ಈ ಸಮಯದಲ್ಲಿ ನಾನು ಉದ್ಯಮಿಗಳು, ಸಂಘ-ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಜನರ ಜೀವ ಉಳಿಸಲು ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ.
ಮಳವಳ್ಳಿಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸತ್ತಿರುವುದಕ್ಕೆ ಯಾರು ಹೊಣೆ? ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಸರ್ಕಾರ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎನ್ನುತ್ತಿದೆ ಎಂದರೆ ಮಾಧ್ಯಮಗಳು ಸುಳ್ಳು ವರದಿ ಪ್ರಸಾರ ಮಾಡಿವೆಯೇ? ನೀವು ತಪ್ಪು ಮಾಡಿದ್ದೀರಾ? ಅಥವಾ ಸರ್ಕಾರ ತಪ್ಪು ಮಾಡುತ್ತಿದೆಯಾ? ಇದೇ ಕಾರಣಕ್ಕೆ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಹೇಳುತ್ತಿದ್ದೇನೆ.
0 التعليقات: