ಇಸ್ರೇಲ್-ಫೆಲೆಸ್ತೀನ್ ಸಂಘರ್ಷ: ಅಮೆರಿಕ-ಫ್ರಾನ್ಸ್ ಬಹಿರಂಗ ಜಗಳ
ವಿಶ್ವಸಂಸ್ಥೆ (ನ್ಯೂಯಾರ್ಕ್), ಮೇ 20: ಇಸ್ರೇಲ್-ಫೆಲೆಸ್ತೀನ್ ಸಂಘರ್ಷವು ವಿಶ್ವಸಂಸ್ಥೆಯಲ್ಲಿ ಅಮೆರಿಕ ಮತ್ತು ಫ್ರಾನ್ಸ್ ದೇಶಗಳ ನಡುವೆಯೂ ರಾಜತಾಂತ್ರಿಕ ಸಂಘರ್ಷವನ್ನು ಹುಟ್ಟು ಹಾಕಿದೆ. ಇದು ಜೋ ಬೈಡನ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಎರಡು ಮಿತ್ರದೇಶಗಳ ನಡುವೆ ಬಹಿರಂಗ ಜಗಳ ಸಂಭವಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಅಮೆರಿಕ ವಿರೋಧಿಸುತ್ತದೆ ಎಂದು ಗೊತ್ತಿದ್ದರೂ, ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷ ಕೊನೆಗೊಳ್ಳಬೇಕು ಹಾಗೂ ಗಾಝಾ ಪಟ್ಟಿಗೆ ಮಾನವೀಯ ನೆರವು ತಲುಪಲು ಅವಕಾಶ ನೀಡಬೇಕು ಎಂಬುದಾಗಿ ಕರೆ ನೀಡುವ ಇನ್ನೊಂದು ನಿರ್ಣಯವನ್ನು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದೆ.
ಸಂಘರ್ಷ ತಕ್ಷಣ ಕೊನೆಗೊಳ್ಳಬೇಕು ಎಂದು ಕರಡು ನಿರ್ಣಯ ಒತ್ತಾಯಿಸುತ್ತದೆ ಹಾಗೂ ಅವಳಿ-ದೇಶ ಪರಿಹಾರದ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಳ್ಳಬೇಕು ಹಾಗೂ ಈ ಪರಿಹಾರಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡುತ್ತದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಕರಡು ನಿರ್ಣಯವನ್ನು ಭದ್ರತಾ ಮಂಡಳಿಯ 15 ದೇಶಗಳಿಗೆ ಒದಗಿಸಲಾಗಿದೆ. ಈ ಬಗ್ಗೆ ನಿರ್ಧರಿಸಲು ಅವುಗಳಿಗೆ ಗುರುವಾರದವರೆಗೆ ಸಮಯಾವಕಾಶವಿದೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ. ಈ ಬಗ್ಗೆ ಯಾವಾಗ ಮತದಾನ ನಡೆಯಬಹುದು ಎಂಬ ಸೂಚನೆಯನ್ನು ಫ್ರಾನ್ಸ್ ನೀಡಿಲ್ಲ.
ಇತ್ತೀಚಿನ ದಿನಗಳಲ್ಲಿ ಅಮೆರಿಕವು ಇಂಥದೇ ನಿರ್ಣಯಗಳಿಗೆ ಪದೇ ಪದೇ ವೀಟೊ ಚಲಾಯಿಸಿ ತಡೆಹಿಡಿದಿದೆ. ಸಂಘರ್ಷವನ್ನು ಕೊನೆಗೊಳಿಸಲು ತಾನು ಬೇರೆ ದಾರಿಗಳನ್ನು ಹುಡುಕುತ್ತಿದ್ದೇನೆ ಎಂದು ಹೇಳಿದೆ.
ಫ್ರಾನ್ಸ್ ನ ನೂತನ ಕರಡು ಪ್ರಸ್ತಾವಕ್ಕೂ ಅಮೆರಿಕ ಕ್ಷಿಪ್ರ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ಬಿದ್ದರೆ ಮತ್ತೊಮ್ಮೆ ವೀಟೊ ಚಲಾಯಿಸುವುದಾಗಿ ಹೇಳಿದೆ.
0 التعليقات: