Saturday, 29 May 2021

ಮುಸ್ಲಿಮೇತರ ಅಲ್ಪಸಂಖ್ಯಾತರ ಪೌರತ್ವ ಅರ್ಜಿ ಸ್ವೀಕರಿಸಲು ಗಝೆಟ್‌ ಅಧಿಸೂಚನೆ ನೀಡಿದ ಕೇಂದ್ರ ಸರಕಾರ


ಮುಸ್ಲಿಮೇತರ ಅಲ್ಪಸಂಖ್ಯಾತರ ಪೌರತ್ವ ಅರ್ಜಿ ಸ್ವೀಕರಿಸಲು ಗಝೆಟ್‌ ಅಧಿಸೂಚನೆ ನೀಡಿದ ಕೇಂದ್ರ ಸರಕಾರ

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2019 ರ ಅಡಿಯಲ್ಲಿ ಕೇಂದ್ರವು ಇನ್ನೂ  ನಿಯಮಗಳನ್ನು ರೂಪಿಸದ ಕಾರಣ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ  ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಂದ ಪೌರತ್ವ ಅರ್ಜಿಯನ್ನು ಸ್ವೀಕರಿಸಲು, ಪರಿಶೀಲಿಸಲು ಹಾಗೂ  ಅನುಮೋದಿಸಲು ಗುಜರಾತ್, ಛತ್ತೀಸ್‌ಗಢ, ರಾಜಸ್ಥಾನ, ಹರ್ಯಾಣ ಹಾಗೂ  ಪಂಜಾಬ್‌ನ 13 ಜಿಲ್ಲೆಗಳಲ್ಲಿನ  ಅಧಿಕಾರಿಗಳಿಗೆ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಅಧಿಕಾರವನ್ನು ನೀಡುವ ಗೆಝೆಟ್ ಅಧಿಸೂಚನೆಯನ್ನು ಕೇಂದ್ರ ಸರಕಾರ ಶುಕ್ರವಾರ ಬಿಡುಗಡೆ ಮಾಡಿದೆ.

ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ  ಕ್ರಿಶ್ಚಿಯನ್ನರನ್ನು ಒಳಗೊಳ್ಳುವ ಸಮುದಾಯಗಳೆಂದು ಅಧಿಸೂಚನೆಯು ಪಟ್ಟಿ ಮಾಡಿದೆ ಹಾಗೂ  ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ.

ಈ ಆದೇಶವನ್ನು ಪೌರತ್ವ ಕಾಯ್ದೆ 1955 ಹಾಗೂ  ಪೌರತ್ವ ನಿಯಮಗಳು, 2009 ರ ಅಡಿಯಲ್ಲಿ ನೀಡಲಾಗಿದೆ , 2019ರ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ನೀಡಲಾಗಿಲ್ಲ.

2019 ರ ತಿದ್ದುಪಡಿ ಕಾಯ್ದೆ ಅದರ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಹಲವಾರು ರಾಜ್ಯಗಳ ಇತರ ಜಿಲ್ಲೆಗಳಿಗೂ ಇದೇ ರೀತಿಯ ಅಧಿಸೂಚನೆಯನ್ನು 2018 ರಲ್ಲಿ ನೀಡಲಾಗಿತ್ತು..

ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾದ ಜಿಲ್ಲೆಗಳೆಂದರೆ: ಮೊರ್ಬಿ, ರಾಜ್‌ಕೋಟ್, ಪಟಾನ್ ಮತ್ತು ವಡೋದರ (ಗುಜರಾತ್); ದುರ್ಗ್ ಹಾಗೂ  ಬಲೋದಬಝಾರ್ (ಛತ್ತೀಸ್‌ಗಢ); ಜಲೋರ್, ಉದಯಪುರ, ಪಾಲಿ, ಬಾರ್ಮರ್ ಹಾಗೂ  ಸಿರೋಹಿ (ರಾಜಸ್ಥಾನ); ಫರಿದಾಬಾದ್ (ಹರ್ಯಾಣ); ಹಾಗೂ  ಜಲಂಧರ್ (ಪಂಜಾಬ್).

ಫರಿದಾಬಾದ್ ಹಾಗೂ  ಜಲಂಧರ್ ಹೊರತುಪಡಿಸಿ ಹರ್ಯಾಣ ಹಾಗೂ  ಪಂಜಾಬ್‌ನ ಗೃಹ ಕಾರ್ಯದರ್ಶಿಗಳಿಗೆ ಅಧಿಸೂಚನೆ ಇದೇ ರೀತಿಯ ಅಧಿಕಾರವನ್ನು ನೀಡಿದೆ.

"ಅರ್ಜಿಯ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಅಥವಾ ಕಾರ್ಯದರ್ಶಿ ಏಕಕಾಲದಲ್ಲಿ ಮಾಡುತ್ತಾರೆ, ಜಿಲ್ಲಾಧಿಕಾರಿ ಅಥವಾ ಕಾರ್ಯದರ್ಶಿ, ಅರ್ಜಿದಾರರ ಸೂಕ್ತತೆಯಿಂದ ತೃಪ್ತಿ ಹೊಂದಿದ ನಂತರ, ನೋಂದಣಿ ಮೂಲಕ ಆತನಿಗೆ ಭಾರತದ ಪೌರತ್ವವನ್ನು ನೀಡುತ್ತಾರೆ ಹಾಗೂ  ನೋಂದಣಿ ಪ್ರಮಾಣಪತ್ರವನ್ನು ನೀಡುತ್ತಾರೆ”ಎಂದು ಅಧಿಸೂಚನೆ ತಿಳಿಸಿದೆ.

2018ರಲ್ಲಿ ಕೂಡ ಸರಕಾರವು ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದಿಲ್ಲಿಯಂತಹ ರಾಜ್ಯಗಳ ನಿರ್ದಿಷ್ಟ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ  ಗೃಹ ಕಾರ್ಯದರ್ಶಿಗಳಿಗೆ ಇದೇ ರೀತಿಯ ಅಧಿಕಾರವನ್ನು ನೀಡಿತ್ತು.

2019 ರ ಡಿಸೆಂಬರ್‌ನಲ್ಲಿ ಸಂಸತ್ತು ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಈ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ  ಅಫ್ಘಾನಿಸ್ತಾನದ ಹಿಂದೂ, ಜೈನ, ಸಿಖ್, ಪಾರ್ಸಿ, ಕ್ರಿಶ್ಚಿಯನ್ ಹಾಗೂ  ಬೌದ್ಧ ಸಮುದಾಯಗಳಿಗೆ ಸೇರಿದ ಅಕ್ರಮ ವಲಸಿಗರಿಗೆ ಪೌರತ್ವ ನೀಡಿತ್ತು. ಆದರೆ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮ್ ಸಮುದಾಯವನ್ನು ಹೊರಗಿಡಲಾಗಿತ್ತು. ಪ್ರತಿಪಕ್ಷಗಳ ತೀವ್ರ ಟೀಕೆಗಳ ಮಧ್ಯೆ ಈ ಕಾಯ್ದೆಯನ್ನುಸಂಸತ್ತಿನಲ್ಲಿ ಅಂಗೀಕರಿಸಲಾಯಿತು, ಕೇಂದ್ರ ಸರಕಾರದ ಈ ಕಾಯ್ದೆ ತಾರತಮ್ಯದಿಂದ ಕೂಡಿದೆ ಎಂಬ ಕಾರಣಕ್ಕೆ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು.


 


SHARE THIS

Author:

0 التعليقات: