Saturday, 8 May 2021

ಡ್ರೋನ್ ಮೂಲಕ ಕೋವಿಡ್ ಲಸಿಕೆ : ತೆಲಂಗಾಣ ಹೊಸ ಪ್ರಯೋಗ


 ಡ್ರೋನ್ ಮೂಲಕ ಕೋವಿಡ್ ಲಸಿಕೆ : ತೆಲಂಗಾಣ ಹೊಸ ಪ್ರಯೋಗ

ಹೊಸದಿಲ್ಲಿ : ಕೋವಿಡ್-19 ವಿರುದ್ಧದ ಸಮರದ ಅಂಗವಾಗಿ ಪ್ರಯೋಗಾತ್ಮಕವಾಗಿ ಡ್ರೋನ್ ಗಳ ಮೂಲಕ ಕೋವಿಡ್-19 ಲಸಿಕೆ ನೀಡುವ ತೆಲಂಗಾಣದ ವಿಶಿಷ್ಟ ಪ್ರಯೋಗಕ್ಕೆ ಕೇಂದ್ರ ಸರ್ಕಾರ ಶನಿವಾರ ಅನುಮತಿ ನೀಡಿದೆ.

ಈ ಸಂಬಂಧ ಮಾನವ ರಹಿತ ವೈಮಾನಿಕ ವ್ಯವಸ್ಥೆ ನಿಯಮಾವಳಿ-2021ರಿಂದ ವಿನಾಯ್ತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಯೋಜನೆಯಡಿ ತೆಲಂಗಾಣದಲ್ಲಿ ಈ ತಿಂಗಳ ಕೊನೆಯ ಒಳಗಾಗಿ ಡ್ರೋನ್ ಮೂಲಕ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಿಸಿದೆ.

ದೃಷ್ಟಿಗೆ ನಿಲುಕದ ಡ್ರೋನ್ ಗಳನ್ನು (ಬಿವಿಎಲ್‌ಓಎಸ್) ಲಸಿಕೆ ನೀಡುವ ಸಲುವಾಗಿ ಪ್ರಯೋಗಾತ್ಮಕವಾಗಿ ಬಳಸಲು ಕೇಂದ್ರದ ವಿಮಾನ ಯಾನಗಳ ಮಹಾನಿರ್ದೇಶಕರು (ಡಿಜಿಸಿಎ) ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ. ಕಳೆದ ವಾರ ತೆಲಂಗಾಣಕ್ಕೆ ಕೋವಿಡ್-19 ಲಸಿಕೆಗಳನ್ನು ದೃಷ್ಟಿಗೆ ನಿಲುಕುವ (ವಿಎಲ್‌ಓಎಸ್) ಶ್ರೇಣಿ ಬಳಸಿಕೊಂಡು ಲಸಿಕೆ ವಿತರಿಸುವ ಡ್ರೋನ್ ಗಳಿಗೆ ಅನುಮತಿ ನೀಡಲಾಗಿತ್ತು. ಇದೀಗ ಅನ್ವಯಿಕೆ ಆಧರಿತ ಮಾದರಿಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಡ್ರೋನ್ ನಿಯೋಜನೆ ಪ್ರಕ್ರಿಯೆಗೆ ವೇಗ ನೀಡುವ ಸಲುವಾಗಿ ಬಿವಿಎಲ್‌ಓಎಸ್ ಡ್ರೋನ್ ಗಳಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಇದಕ್ಕೂ ಮುನ್ನ ಐಎಂಸಿಆರ್ ಕಳೆದ ತಿಂಗಳು ಕಾನ್ಪುರ ಐಐಟಿ ಸಹಯೋಗದಲ್ಲಿ ಡ್ರೋನ್ ಗಳನ್ನು ಬಳಸಿಕೊಂಡು ಕೋವಿಡ್-19 ಲಸಿಕೆ ನೀಡುವ ಕಾರ್ಯಸಾಧ್ಯತೆಯ ಅಧ್ಯಯನಕ್ಕೆ ಅನುಮತಿ ನೀಡಿತ್ತು.


SHARE THIS

Author:

0 التعليقات: