Sunday, 9 May 2021

ಸಂಪೂರ್ಣ ಲಾಕ್‌ಡೌನ್: ಉಡುಪಿ ಜಿಲ್ಲೆಯಲ್ಲಿ ವಿನಾಕಾರಣ ರಸ್ತೆಗಿಳಿದ ವಾಹನಗಳ ವಿರುದ್ಧ ಕ್ರಮ

 

ಸಂಪೂರ್ಣ ಲಾಕ್‌ಡೌನ್: ಉಡುಪಿ ಜಿಲ್ಲೆಯಲ್ಲಿ ವಿನಾಕಾರಣ ರಸ್ತೆಗಿಳಿದ ವಾಹನಗಳ ವಿರುದ್ಧ ಕ್ರಮ

ಉಡುಪಿ: ಇಂದಿನಿಂದ 14 ದಿನಗಳಿಗೆ ಅನ್ವಯವಾಗುವಂತೆ ಜಾರಿಯಾಗಿರುವ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸುತ್ತಿರುವ ಪೊಲೀಸರು, ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳ ವಿರುದ್ಧ ಕ್ರಮ ಜರಗಿಸುತ್ತಿದ್ದಾರೆ. ಉಡುಪಿ ನಗರದಲ್ಲಿ ಬೆಳಗ್ಗೆಯಿಂದ ಕೆಲವು ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗಾಗಿ ದ್ವಿಚಕ್ರ ವಾಹನಗಳಲ್ಲಿ ಹಾಗೂ ಕಾರುಗಳಲ್ಲಿ ಆಗಮಿಸುತ್ತಿರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಪೊಲೀಸರು ನಗರದ ಕೆಎಂ ಮಾರ್ಗ, ಕಲ್ಸಂಕ, ಶಿರಿಬೀಡುಗಳಲ್ಲಿ ತಪಾಸಣೆ ಕಾರ್ಯ ನಡೆಸಿದರು.

ಕಾಪು, ಕುಂದಾಪುರ, ಹೆಬ್ರಿ, ಮಲ್ಪೆ, ಕಾರ್ಕಳ, ಪಡುಬಿದ್ರೆಗಳಲ್ಲೂ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಕಾರಣ ಇಲ್ಲದೆ ತಿರುಗಾಡುತ್ತಿದ್ದ ವಾಹನಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಆಗಮಿಸಿ ತಪಾಸಣಾ ಕಾರ್ಯವನ್ನು ಪರಿಶೀಲಿಸಿದರು. ಎಲ್ಲ ಕಡೆಗಳಲ್ಲಿಯೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸಲು ಅವಕಾಶ ನೀಡಲು ಆಗ್ರಹ

ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಕಾಲ್ನಡಿಗೆಯಲ್ಲಿ ಅಂಗಡಿಗಳಿಗೆ ತೆರಳಬೇಕೆಂಬ ಸೂಚನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಗಡಿಗಳ ಎದುರು ಗಂಟೆಗಟ್ಟಲೆ ಕ್ಯೂ ನಿಂತು ಖರೀದಿಸುವ 20, 30 ಕೆ.ಜಿ.ಯಷ್ಟು ಅಕ್ಕಿ, ದಿನಸಿ ಸಾಮಗ್ರಿಗಳನ್ನು 2, 3 ಕಿ.ಮೀ. ದೂರದವರೆಗೆ ಹೊತ್ತುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಆದ್ದರಿಂದ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನು ಬಳಸಲು ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.


SHARE THIS

Author:

0 التعليقات: