Monday, 10 May 2021

ಸಂಪೂರ್ಣ ಲಾಕ್ಡೌನ್: ಮಂಗಳೂರಿನಲ್ಲಿ ನೂರಾರು ವಾಹನಗಳ ಜಪ್ತಿ


 ಸಂಪೂರ್ಣ ಲಾಕ್ಡೌನ್: ಮಂಗಳೂರಿನಲ್ಲಿ ನೂರಾರು ವಾಹನಗಳ ಜಪ್ತಿ

ಮಂಗಳೂರು: ಸರಕಾರ ಇಂದು ಬೆಳಗ್ಗೆಯಿಂದ 14 ದಿನಗಳ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಆರೋಪದಲ್ಲಿ ನೂರಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಅತೀ ಅಗತ್ಯವಾದಲ್ಲಿ ಮಾತ್ರವೇ ವಾಹನ ಬಳಸಿ, ಸಮೀಪದ ಅಂಗಡಿಗಳಲ್ಲಿಯೇ ಅಗತ್ಯ ವಸ್ತುಗಳನ್ನು ಖರೀದಿಸಿ ಎಂದು ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿತ್ತಾದರೂ, ಎಲ್ಲೆಡೆ ಎಗ್ಗಿಲ್ಲದಂತೆ ಬೆಳಗ್ಗಿನಿಂದಲೇ ವಾಹನಗಳು ರಸ್ತೆಯುದ್ದಕ್ಕೂ ಕಂಡು ಬಂದವು.

ಮಂಗಳೂರು ನಗರದ ಹಂಪನಕಟ್ಟೆಗೆ ಬಿ.ಸಿ.ರೋಡು, ಕಣ್ಣೂರು, ಕುಲಶೇಖರ ಮೊದಲಾದ ಗ್ರಾಮಾಂತರ ಭಾಗಗಳಿಂದ ಇಂದು ಖರೀದಿಗಾಗಿ ಜನ ಆಗಮಿಸಿದ್ದರು. ನಗರದ ಹೊರ ವಲಯಗಳಿಂದಲೂ ಮೀನು, ದಿನಸಿ, ತರಕಾರಿ ಹಣ್ಣು ಹಂಪಲು ನಗರದ ಹಂಪನಕಟ್ಟೆ ಬಳಿ ಮಾರುಕಟ್ಟೆಗಳಲ್ಲಿ ಕಡಿಮೆ ದರದಲ್ಲಿ ಖರೀದಿಸುವ ಸಲುವಾಗಿ ವಾಹನಗಳಲ್ಲಿಯೇ ಜನಸಾಮಾನ್ಯರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು.

ಮನೆ ಸಮೀಪದ ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಬೆಲೆ ದುಬಾರಿ, ಕೆಲವು ಅಗತ್ಯ ವಸ್ತುಗಳು ಸಿಗುವುದಿಲ್ಲ, ಮೀನು ತಾಜಾ ಸಿಗುವುದಿಲ್ಲ ಎಂಬುದು ನಗರಕ್ಕೆ ದೂರದಿಂದ ಬಂದ ಗ್ರಾಹಕರ ವಾದವಾಗಿತ್ತು. ಬೆಳಗ್ಗೆ 9 ಗಂಟೆಯವರೆಗೆ ವಾಹನಗಳ ಓಡಾಟಕ್ಕೆ ಅವಕಾಶವಿದ್ದರೂ ಪೊಲೀಸರು 8 ಗಂಟೆಯ ವೇಳೆಗೇ ವಾಹನಗಳನ್ನು ಹಿಡಿದಿಟ್ಟಿದ್ದಾರೆ ಮಾಡಿದ್ದಾರೆಂಬ ಆರೋಪವೂ ವ್ಯಕ್ತವಾಯಿತು. ಯಾವುದೇ ಸಮಜಾಯಿಷಿ ಬೇಡ, ದಿನಸಿ ಅಗತ್ಯ ವಸ್ತುಗಳನ್ನು ಮನೆ ಬಳಿಯೇ ಖರೀದಿಸಬೇಕು. ಇಲ್ಲವಾದರೆ ನಡೆದುಕೊಂಡು ಹೋಗಬೇಕೆಂದು ಸೂಚಿಸಿದ್ದರೂ ಅನಗತ್ಯವಾಗಿ ಸಣ್ಣ ಪುಟ್ಟ ಖರೀದಿಗೆ ದೂರದಿಂದ ಇಲ್ಲಿಗೆ ಬಂದಿದ್ದು ಯಾಕೆ ಎಂಬ ಪ್ರಶ್ನೆ ಪೊಲೀಸರದ್ದಾಗಿತ್ತು. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಬೆಳಗ್ಗೆ 8 ಗಂಟೆಯಿಂದ ವಾಗ್ವಾದ, ವಾಹನ ಬಿಡುವಂತೆ ಮನವಿಯೂ ಮುಂದುವರಿಯಿತು.

ಮಂಗಳೂರಿನ ವಿವಿಧ ಪ್ರಮುಖ ಮಾರುಕಟ್ಟೆ, ಆಯಾಕಟ್ಟಿನ ಸ್ಥಳಗಳಿಗೆ ಖುದ್ದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿದವರಿಗೆ ಎಚ್ಚರಿಕೆ ನೀಡಿದರು. ಜಪ್ತಿ ಮಾಡಲಾಗಿರುವ ವಾಹನವನ್ನು ಕೋರ್ಟ್ ಮೂಲಕ ಬಿಡಿಸಿಕೊಳ್ಳಿ ಎಂದು ಹೇಳಿದರು.

ಯುವಕರ ತ್ರಿಬಲ್ ರೈಡ್- ಪೊಲೀಸರನ್ನು ಕಂಡು ಓಡಿದರು!

ಪೊಲೀಸ್ ಅಧಿಕಾರಿಗಳು ಪರಿಶೀಲನೆಗೆಂದು ತೆರಳುತ್ತಿದ್ದ ಸಂದರ್ಭ ನಗರದ ಕಾರ್‌ಸ್ಟ್ರೀಟ್ ಬಳಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡ್‌ನಲ್ಲಿ ಸಂಚರಿಸುತ್ತಿದ್ದು, ಪೊಲೀಸರನ್ನು ಕಂಡು ತರಾತುರಿಯಲ್ಲಿ ಗಾಡಿಯನ್ನು ಅತೀ ವೇಗದಿಂದ ಹಿಂದಿರುಗಿಸಿಕೊಂಡು ಹೋದರು. ಇದೇ ವೇಳೆ ನಗರದ ಕೆಲವಡೆ ಪೊಲೀಸ್ ವಾಹನಗಳನ್ನು ಕಂಡು ಅರ್ಧ ದಾರಿಯಿಂದಲೇ ವಾಹನಗಳೊಂದಿಗೆ ಹಿಂದಿರುಗಿದ ಪ್ರಸಂಗವೂ ನಡೆಯಿತು. ಇದೇ ವೇಳೆ ನಗರದ ಕೆಲವು ಕಡೆ ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿದ್ದವರ ಮೇಲೆ ಪೊಲೀಸ್ ಅಧಿಕಾರಿಗಳು ಲಾಠಿ ಎತ್ತಿ ಎಚ್ಚರಿಕೆ ನೀಡಿದ ಘಟನೆಯೂ ನಗರದಲ್ಲಿ ನಡೆಯಿತು.


SHARE THIS

Author:

0 التعليقات: