Wednesday, 19 May 2021

ಪುತ್ತೂರಿನಲ್ಲಿ ಒಂದು ಕೋ.ರೂ. ವೆಚ್ಚದ ಆಕ್ಸಿಜನ್ ಪ್ಲಾಂಟ್‌


ಪುತ್ತೂರಿನಲ್ಲಿ ಒಂದು ಕೋ.ರೂ. ವೆಚ್ಚದ ಆಕ್ಸಿಜನ್ ಪ್ಲಾಂಟ್‌ 

ಪುತ್ತೂರು, ಮೇ 19: ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿ ಕ್ಯಾಂಪ್ಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ 450 ಎಲ್‌ಎಪಿ ಉತ್ಪಾದನಾ ಸಾಮರ್ಥ್ಯದ ಸಿಲಿಂಡರ್ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಬುಧವಾರ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಸಂಸ್ಥೆಯು ಪುತ್ತೂರಿಗೆ ಹಲವಾರು ದೊಡ್ಡ ಮಟ್ಟದ ಕೊಡುಗೆಗಳನ್ನು ಈ ಹಿಂದಿನಿಂದಲೂ ನೀಡುತ್ತಾ ಬಂದಿದೆ. ಇದೀಗ ಆಕ್ಸಿಜನ್ ಪ್ಲಾಂಟ್ ನಿರ್ಮಾಣದಿಂದ ಪುತ್ತೂರಿನ ಸುತ್ತಮುತ್ತಲ ತಾಲೂಕುಗಳಾದ ಬೆಳ್ತಂಗಡಿ, ಸುಳ್ಯ, ಕಡಬಗಳಿಗೆ ಸಹಾಯವಾಗಲಿದೆ ಎಂದರು.

ಪುತ್ತೂರಿನ ಸರ್ಕಾರಿ ಆಸ್ಪತ್ರೆಯನ್ನು 300 ಬೆಡ್‌ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದರೊಂದಿಗೆ ಪುತ್ತೂರಿನಲ್ಲಿರುವ ಶವಾಗಾರದ ಸಮಸ್ಯೆಯನ್ನೂ ಮುಂದಿನ 2 ದಿನಗಳ ಒಳಗಾಗಿ ಪರಿಹರಿಸಲಾಗುವುದು ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಮಾತನಾಡಿ, ಕ್ಯಾಂಪ್ಕೋ ಕೇಂದ್ರ ಕಚೇರಿ ಮಂಗಳೂರಿನಲ್ಲಿದ್ದರೂ ಸಂಸ್ಥೆಯ ಹೃದಯ ಪುತ್ತೂರಿನಲ್ಲಿದೆ. ಸಂಸ್ಥೆಯ ವತಿಯಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲು ಇಲ್ಲಿನ ಶಾಸಕರ ಮುತುರ್ಜಿಯೇ ಕಾರಣ ಎಂದರು.

ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅದ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್, ಪುಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ತಹಶೀಲ್ದಾರ್ ರಮೇಶ್ ಬಾಬು, ಕ್ಯಾಂಪ್ಕೋ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.


 SHARE THIS

Author:

0 التعليقات: