Wednesday, 19 May 2021

ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುವ ಗುರಿ: ಸಚಿವ ಡಾ.ಕೆ.ಸುಧಾಕರ್

ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುವ ಗುರಿ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಮೇ 19: ಗ್ರಾಮೀಣ ಪ್ರದೇಶಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ, ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸ್ಥಳೀಯ ಮಟ್ಟದ ಟಾಸ್ಕ್ ಫೋರ್ಸ್ ಈ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸ್ಥಳೀಯರು, ಸಂಘಟನೆ, ಮುಖಂಡರಿದ್ದು, ಕೋವಿಡ್-19 ಸೋಂಕನ್ನು ನಿರ್ವಹಣೆ ಮಾಡುತ್ತಾರೆ. ರೋಗಿಗೆ ಮನೆ ಆರೈಕೆ ಸೌಲಭ್ಯಗಳಿಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

2 ಕೋಟಿ ಕೋವಿಶೀಲ್ಡ್ ಲಸಿಕೆ ಖರೀದಿಸಲು ಸೀರಂ ಸಂಸ್ಥೆಗೆ ಆರ್ಡರ್ ನೀಡಲಾಗಿದೆ. ಈ ಪೈಕಿ 2 ಲಕ್ಷ ಡೋಸ್ ರಾಜ್ಯಕ್ಕೆ ಬಂದಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಹಾಗೂ ಮೊದಲ ಡೋಸ್ ನೀಡಲಾಗುತ್ತಿದೆ. ಕೇಂದ್ರ ಸರಕಾರ ಈವರೆಗೆ 1,11,26,340 ಡೋಸ್ ಲಸಿಕೆ ನೀಡಿದೆ. ರಾಜ್ಯ ಸರಕಾರದಿಂದ ನೇರವಾಗಿ 9.50 ಲಕ್ಷ ಡೋಸ್ ಕೋವಿಶೀಲ್ಡ್, 1,44,170 ಕೋವ್ಯಾಕ್ಸಿನ್ ಖರೀದಿ ಸೇರಿ ಒಟ್ಟು 1,22,20,510 ಡೋಸ್ ಲಸಿಕೆ ರಾಜ್ಯಕ್ಕೆ ದೊರೆತಿದೆ. ಈವರೆಗೆ 1,13,61,234 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

ಅಕ್ಟೋಬರ್, ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡಲು ಪ್ರಯತ್ನಿಸಲಾಗುತ್ತಿದೆ. ಭಾರತ್ ಬಯೋಟೆಕ್ ಘಟಕ ನಮ್ಮ ರಾಜ್ಯದಲ್ಲೇ ಇದ್ದು, ಅಲ್ಲಿಂದಲೂ ಲಸಿಕೆ ಸಿಗುವ ಭರವಸೆ ದೊರೆತಿದೆ. ಸ್ಪುಟ್ನಿಕ್ ಲಸಿಕೆಯೂ ನಮ್ಮ ರಾಜ್ಯದಲ್ಲೇ ಉತ್ಪಾದನೆಯಾಗಲಿದ್ದು, ಬೇಗ ಲಸಿಕೆ ಸಿಗುವ ವಿಶ್ವಾಸವಿದೆ ಎಂದ ಅವರು, ನಿನ್ನೆ 58,395 ಮಂದಿ ಕೋವಿಡ್‍ನಿಂದ ಗುಣಮುಖರಾಗಿರುವುದು ಆಶಾದಾಯಕ. ಈವರೆಗೆ 16,74,487 ಜನರು ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಯಾವಾಗಲೂ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ ನೋಡಿ ಆತಂಕಪಡಬಾರದು ಎಂದು ಸಲಹೆ ಮಾಡಿದರು.

ಗ್ರೀನ್‍ಕೋ 10 ಎಲ್‍ಪಿಎಂನ 200 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 1,050 ವೈಲ್‍ಗಳನ್ನು ಕೇಂದ್ರ ಸರಕಾರ ನೀಡಿದೆ. ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ಬೇಗ 500 ವೈಲ್ ನೀಡಲು ಮನವಿ ಮಾಡಲಾಗಿದೆ. ಈ ಸೋಂಕು ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಕ್ರಮ ವಹಿಸಲಾಗಿದೆ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರ್ಥಿಕ ಪರಿಹಾರ ಘೋಷಿಸಿರುವುದು ಕಷ್ಟಕಾಲದಲ್ಲಿರುವ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.



SHARE THIS

Author:

0 التعليقات: