Monday, 10 May 2021

"ನನಗೆ ಉತ್ತಮ ಚಿಕಿತ್ಸೆ ಲಭಿಸಿದ್ದರೆ ನಾನು ಬದುಕುಳಿಯುತ್ತಿದ್ದೆ" : ಸಹಾಯಕ್ಕಾಗಿ ಮನವಿ ಮಾಡಿದ ಬೆನ್ನಲ್ಲೇ ಮೃತಪಟ್ಟ ಯೂಟ್ಯೂಬರ್


 "ನನಗೆ ಉತ್ತಮ ಚಿಕಿತ್ಸೆ ಲಭಿಸಿದ್ದರೆ ನಾನು ಬದುಕುಳಿಯುತ್ತಿದ್ದೆ" : ಸಹಾಯಕ್ಕಾಗಿ ಮನವಿ ಮಾಡಿದ ಬೆನ್ನಲ್ಲೇ ಮೃತಪಟ್ಟ ಯೂಟ್ಯೂಬರ್

ಹೊಸದಿಲ್ಲಿ: ನಟ ಹಾಗೂ ಖ್ಯಾತ ಯೂಟ್ಯೂಬರ್‌ ರಾಹುಲ್‌ ವೋಹ್ರಾ ಕೋವಿಡ್‌ ಸೋಂಕಿನ ಕಾರಣದಿಂದಾಗಿ ರವಿವಾರ ದಿಲ್ಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತಾದಂತೆ ನಿರ್ದೇಶಕ ಅರವಿಂದ್‌ ಗೌರ್‌ ಸುದ್ದಿಯನ್ನು ದೃಢಪಡಿಸಿದ್ದಾರೆ. ಶನಿವಾರವಷ್ಟೇ ರಾಹುಲ್‌ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಸಹಾಯ ಯಾಚನೆ ಮಾಡಿದ್ದು ಸದ್ಯ ಸುದ್ದಿಯಾಗಿದೆ. 

ಅವರು ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶನಿವಾರ ಸಂಜೆ ಅವರನ್ನು ಆಯುಷ್ಮಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

"ನನಗೆ ಉತ್ತಮ ಚಿಕಿತ್ಸೆ ದೊರಕಿದ್ದರೆ ನಾನು ಬದುಕುಳಿಯುತ್ತಿದ್ದೆ" ಎಂದು ಶನಿವಾರದಂದು ಫೇಸ್ಬುಕ್‌ ಖಾತೆಯಲ್ಲಿ ಬರೆದಿದ್ದ ಅವರು, ತಮ್ಮ ಹೆಸರು ಮತ್ತು ವಿವರಗಳನ್ನೂ ಬರೆದಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮನೀಶ್‌ ಸಿಸೋಡಿಯಾರನ್ನು ಟ್ಯಾಗ್‌ ಮಾಡಿದ್ದರು. 

ಸದ್ಯ ಈ ಕುರಿತಾದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.  "ರಾಹುಲ್‌ ವೋಹ್ರಾ ಮೃತಪಟ್ಟಿದ್ದಾನೆ. ನಿನ್ನೆಯಷ್ಟೇ ತನಗೆ ಉತ್ತಮ ಚಿಕಿತ್ಸೆ ದೊರಕಿದರೆ ನಾನು ಬದುಕುಳಿಯುತ್ತೇನೆ ಎಂದು ಹೇಳಿದ್ದ. ಆತನನ್ನು ಆಯುಷ್ಮಾನ್‌ ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಆತನನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸು. ನಾವೆಲ್ಲ ಅಪರಾಧಿಗಳು. ಗೌರವಗಳು" ಎಂದು ಅರವಿಂದ್‌ ಗೌರ್‌ ಬರೆದುಕೊಂಡಿದ್ದಾರೆ.


SHARE THIS

Author:

0 التعليقات: