ಮುಂಬೈ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಆರ್ಟಿಪಿಸಿಆರ್ ವರದಿ ಬೇಡ
ಮುಂಬೈ, ಜೂನ್ 01: ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಾರಾಷ್ಟ್ರದಿಂದ ಬಂದಿಳಿಯುವ ದೇಶೀಯ ವಿಮಾನ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಿಲ್ಲ ಎಂದು ಬೃಹನ್ ಮುಂಬೈ ಕಾರ್ಪೊರೇಷನ್ ಹೇಳಿದೆ.
ಈ ಕುರಿತು ಬೃಹನ್ ಮುಂಬೈ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಮಹಾರಾಷ್ಟ್ರದೊಳಗಿನ ವಿಮಾನ ನಿಲ್ದಾಣಗಳಿಂದ ಮುಂಬೈಗೆ ಬರುವ ಎಲ್ಲಾ ದೇಶೀಯ ವಾಯು ಪ್ರಯಾಣಿಕರಿಗೆ ಮುಂಬೈಗೆ ಬಂದಿಳಿದ ನಂತರ ಆರ್ಟಿ-ಪಿಸಿಆರ್ ಪರೀಕ್ಷಾ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.
ಮುಂಬೈ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವ ಎಲ್ಲಾ ದೇಶೀಯ ವಿಮಾನ ಪ್ರಯಾಣಿಕರಿಗೆ , ವಿಮಾನ ನಿಲ್ದಾಣ ಆಯೋಜಕರು, ವಿಮಾನ ಸಂಸ್ಥೆಗಳು ಆರ್ಟಿಪಿಸಿಆರ್ ಪರೀಕ್ಷೆಗೆ ಒತ್ತಾಯಿಸಬಾರದು ಎಂದು ಹೇಳಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಇದಲ್ಲದೆ ಮುಂದಿನ 15 ದಿನಗಳವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಪರ್ಯಾಯ ದಿನಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯವಿಲ್ಲದ ಅಂಗಡಿಗಳಿಗೂ ಕೂಡ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.'
ಪ್ರಸ್ತುತ ಬೆಳಗ್ಗೆ 7 ರಿಂದ 11ರವರೆಗೆ ಕಾರ್ಯ ನಿರ್ವಹಿಸಲು ಅನುಮತಿ ಹೊಂದಿರುವ ಅಗತ್ಯ ಸವ್ತುಗಳ ಮಾರಾಟ ಮಾಡುವ ಅಂಗಡಿಗಳಿಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ದಿನಗಳಲ್ಲೂ ತೆರೆಯಲು ಅವಕಾಶ ಮಾಡಿಕೊಡಲಾಗಿದೆ.
ಮುಂದಿನ ವಾರ ರಸ್ತೆಯ ಎಡ ಭಾಗದಲ್ಲಿರುವ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ತೆರೆದಿರುತ್ತದೆ, ಬಲಭಾಗದಲ್ಲಿರುವ ಅಂಗಡಿಗಳು ಮಂಗಳವಾರ, ಗುರುವಾರ ತೆರೆದಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಬ್ರೇಕ್ ದಿ ಚೈನ್ ಅಡಿಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದೇಶನಗಳು ಜಾರಿಯಲ್ಲಿರುವವರೆಗೂ ಈ ಆದೇಶಗಳು ಅನ್ವಯವಾಗುತ್ತವೆ ಎಂದು ಬಿಎಂಸಿ ಹೇಳಿದೆ. ಕಾಲಕಾಲಕ್ಕೆ ಸರ್ಕಾರ ಘೋಷಿಸಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಇತರೆ ಕ್ರಮವನ್ನು ಅನುಸರಿಸುವುದು ಕಡ್ಡಾಯವಾಗಿದೆ.
0 التعليقات: