Thursday, 6 May 2021

ಕೇರಳದಲ್ಲಿ ನಮ್ಮ ವಿಜಯ ದೇಶಾದ್ಯಂತ ಎಡಪಕ್ಷಗಳು ಮತ್ತು ಜಾತ್ಯತೀತ ಶಕ್ತಿಗಳ ಪುನಶ್ಚೇತನಕ್ಕೆ ನೆರವಾಗಲಿದೆ: ಪಿಣರಾಯಿ ವಿಜಯನ್


 ಕೇರಳದಲ್ಲಿ ನಮ್ಮ ವಿಜಯ ದೇಶಾದ್ಯಂತ ಎಡಪಕ್ಷಗಳು ಮತ್ತು ಜಾತ್ಯತೀತ ಶಕ್ತಿಗಳ ಪುನಶ್ಚೇತನಕ್ಕೆ ನೆರವಾಗಲಿದೆ: ಪಿಣರಾಯಿ ವಿಜಯನ್

ತಿರುವನಂತಪುರಂ: ಹಲವು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಸಿಪಿಎಂ ನೇತೃತ್ವದ ಎಡರಂಗ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಸಾಧಿಸುವುದರೊಂದಿಗೆ ದಾಖಲೆ ಬರೆದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೇರಳ ಜನ ಸರ್ಕಾರವನ್ನು ಬದಲಿಸುತ್ತಾ ಬಂದ 42 ವರ್ಷಗಳ ಸಂಪ್ರದಾಯವನ್ನು ಈ ಬಾರಿಯ ಎಲ್‌ಡಿಎಫ್ ವಿಜಯ ಮುರಿದಿದ್ದು, 76 ವರ್ಷದ ಈ ವಿಜಯದ ಹರಿಕಾರ ಪಿಣರಾಯಿ ವಿಜಯನ್ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಅವರು, "ಕೇರಳದಲ್ಲಿ ನಮ್ಮ ವಿಜಯ ದೇಶಾದ್ಯಂತ ಎಡಪಕ್ಷಗಳು ಮತ್ತು ಜಾತ್ಯತೀತ ಶಕ್ತಿಗಳ ಪುನಶ್ಚೇತನಕ್ಕೆ ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಈ ಐತಿಹಾಸಿಕ ವಿಜಯ ಕೇವಲ ನಮ್ಮ ಸಾಧನೆಯಲ್ಲ; ಜನತೆಯ ಸಾಧನೆ. ಋಣಾತ್ಮಕ ರಾಜಕೀಯ ಮಾಡುವವರನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವುದು ಅವರ ಸ್ಪಷ್ಟ ಸಂದೇಶ. ಪ್ರಮುಖ ವಿಕೋಪಗಳ ನಡುವೆಯೂ ನಮ್ಮ ಭರವಸೆಗಳನ್ನು ಬಹುತೇಕ ಈಡೇರಿಸಿದ್ದಕ್ಕೆ ಜನ ಪ್ರತಿಫಲ ಕೊಟ್ಟಿದ್ದಾರೆ" ಎಂದು ಪಿಣರಾಯಿ ಬಣ್ಣಿಸಿದ್ದಾರೆ.

ನಮ್ಮ ಬದ್ಧತೆಗೆ ಅನುಗುಣವಾಗಿ ಪ್ರತಿ ವರ್ಷ ಪ್ರಗತಿ ವರದಿಯನ್ನು ಪ್ರಕಟಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಪಾರದರ್ಶಕ ನೀತಿಯಿಂದಾಗಿ ಆಡಳಿತದ ಜತೆ ಜನತೆ ಉತ್ತಮ ಸಂಪರ್ಕ ಸಾಧಿಸುವುದು ಸಾಧ್ಯವಾಗಿದೆ. ಕಲ್ಯಾಣ ಕ್ರಮಗಳು ಮತ್ತು ಅಭಿವೃದ್ಧಿ ಪ್ರಯತ್ನಗಳು ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದ್ದು, ಜನ ದೊಡ್ಡ ಬಹುಮತದೊಂದಿಗೆ ಇದನ್ನು ದೃಢಪಡಿಸಿದ್ದಾರೆ ಎಂದು ಹೇಳಿದರು.

"ನಾವು ಬಂಗಾಲದಲ್ಲಿ ಹಿನ್ನಡೆ ಅನುಭವಿಸಿದ್ದೇವೆ ನಿಜ; ಆದರೆ ಈ ವಿಜಯವು ದೇಶದಲ್ಲಿ ಎಡರಂಗ ಮತ್ತು ಜಾತ್ಯತೀತ ಶಕ್ತಿಗಳ ಪುನಶ್ಚೇತನಕ್ಕೆ ಕಾರಣವಾಗಲಿದೆ. ಎಲ್ಲರೂ ಕೇರಳದತ್ತ ನೋಡುತ್ತಾ ಬಂದಿದ್ದಾರೆ. ನಾವು ಯಶಸ್ವಿಯಾಗಿ ಆರೆಸ್ಸೆಸ್‌ನ ಕೋಮು ಕಾರ್ಯಸೂಚಿಯನ್ನು ಹಿಮ್ಮೆಟ್ಟಿಸಿದ್ದೇವೆ. ಸಾಮಾಜಿಕ ಹಾಗೂ ಆರ್ಥಿಕ ವಲಯದಲ್ಲಿ ಪರ್ಯಾಯ ಕಾರ್ಯಸೂಚಿಯನ್ನು ನಾವು ನೀಡಿದ್ದೇವೆ. ಈ ವಿಜಯ ಹಲವರಿಗೆ ಸ್ಫೂರ್ತಿಯಾಗುತ್ತದೆ ಎಂಬ ವಿಶ್ವಾಸ ನಮ್ಮದು" ಎಂದು ವಿವರಿಸಿದರು.

ಕಾಂಗ್ರೆಸ್‌ನಿಂದ ತೆರವಾದ ಸ್ಥಾನವನ್ನು ಬಿಜೆಪಿ ತುಂಬುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ, "ಮತದಾರರು ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದ್ದ ಏಕೈಕ ಸ್ಥಾನವನ್ನೂ ಅವರು ಕಳೆದುಕೊಂಡಿದ್ದಾರೆ. ಅವರ ಖಾತೆ ಶೂನ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮತ ಗಳಿಕೆ ಕೂಡಾ ಗಣನೀಯವಾಗಿ ಕುಸಿದಿದೆ. ಬಿಜೆಪಿ ಗಳಿಸಿದ ಒಟ್ಟು ಮತಗಳ ಸಂಖ್ಯೆ ಅವರ ಸದಸ್ಯತ್ವದ ಸಂಖ್ಯೆಯಷ್ಟೂ ಇಲ್ಲ ಎನ್ನುವುದನ್ನು ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ" ಎಂದು ಲೇವಡಿ ಮಾಡಿದರು.


SHARE THIS

Author:

0 التعليقات: