Thursday, 6 May 2021

ಲಾಕ್‌ ಡೌನ್‌ನಲ್ಲಿ ಅಸಹಾಯಕರ ಬಾಯರಿಕೆ, ಹಸಿವು ನೀಗಿಸುವ ಪೊಲೀಸ್ ಅಧಿಕಾರಿ !

 

ಲಾಕ್‌ ಡೌನ್‌ನಲ್ಲಿ ಅಸಹಾಯಕರ ಬಾಯರಿಕೆ, ಹಸಿವು ನೀಗಿಸುವ ಪೊಲೀಸ್ ಅಧಿಕಾರಿ !

ಉಡುಪಿ: ಲಾಕ್‌ ಡೌನ್‌ನಲ್ಲಿ ಅಸಹಾಯಕರ ಬಾಯರಿಕೆ, ಹಸಿವು ನೀಗಿಸುವ ಕೆಲಸವನ್ನು ಸದ್ದಿಲ್ಲದೆ ನಡೆಸುತ್ತಿರುವ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ದಂಡದ ಬದಲು ಮಾಸ್ಕ್ ವಿತರಿಸುವ ಮೂಲಕ ಜನರ ಮನಸ್ಸು ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಸುಮಾರು 1000 ಮಾಸ್ಕ್ ತರಿಸಿಕೊಂಡು ತನ್ನ ಜೀಪಿನಲ್ಲಿ ಇಟ್ಟುಕೊಂಡಿ ರುವ ಇವರು, ಅಗತ್ಯ ಇರುವ ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು, ಭಿಕ್ಷುಕ ರಿಗೆ ವಿತರಿಸುತ್ತಿದ್ದಾರೆ. ಅದೇ ರೀತಿ ಇವರ ಜೀಪಿನಲ್ಲಿ ಬಿಸ್ಕಿತ್, ನೀರಿನ ಬಾಟಲಿ, ಊಟ, ಹಣ್ಣು ಹಂಪಲು, ಮಾಸ್ಕ್, ಸ್ಯಾನಿಟೈಸರ್‌ಗಳು ಸದಾ ಇರುತ್ತದೆ. ಅಗತ್ಯ ಬಿದ್ದ ಅರ್ಹ ಫಲಾನುಭವಿಗಳಿಗೆ ಇದನ್ನು ವಿತರಿಸುವ ಮೂಲಕ ಮಾನವೀತಯತೆ ಮೆರೆಯುತ್ತಿದ್ದಾರೆ.

ರೌಂಡ್ಸ್‌ನಲ್ಲಿರುವಾಗ ಊಟ ಸಿಗದೆ ತೊಂದರೆ ಅನುಭವಿಸುವವರಿಗೆ ಸ್ವತ: ಇವರೇ ಜೀಪಿನಲ್ಲಿ ತೆರಳಿ ಹೊಟೇಲಿನಿಂದ ಪಾರ್ಸೆಲ್ ಊಟ ತಂದು ನೀಡುತ್ತಿ ದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

‘ಸಂತೆಕಟ್ಟೆಯಲ್ಲಿ ಎರಡು ದಿನಗಳಿಂದ ಕೆಟ್ಟು ನಿಂತ ಲಾರಿ ಚಾಲಕ ನಿಗೆ ಬೆಳಗ್ಗೆ ಎರಡು ಬಾಟಲಿ ನೀರು ಕೊಟ್ಟು ಬಂದಿದ್ದೇನೆ. ಸಂಜೆ ಹೋದಾಗ ಕೂಡ ಚಾಲಕ ಅಲ್ಲೇ ಇದ್ದನು. ಮೆಕ್ಯಾನಿಕ್ ಸಿಗದೆ ಲಾರಿ ಸರಿಯಾಗಿಲ್ಲ ಎಂದು ಹೇಳಿದನು. ಆಗ ಆತ ಮಧ್ಯಾಹ್ನ ಊಟ ಮಾಡಿಲ್ಲ ಎಂದು ಗೊತ್ತಾಯಿತು. ಅದಕ್ಕೆ ಸಮೀಪದ ಹೊಟೇಲಿನಿಂದ ಊಟ ಪಾರ್ಸೆಲ್ ತಂದು ನೀಡಿದ್ದೇನೆ’ ಎಂದು ಮಂಜುನಾಥ್ ತಿಳಿಸಿದ್ದಾರೆ.

ಕಷ್ಟದಲ್ಲಿರುವವರಿಗೆ ನೆರವು

ಕಳೆದ ಲಾಕ್‌ ಡೌನ್‌ನಲ್ಲಿಯೂ ಮಂಜುನಾಥ್ ಸಾಕಷ್ಟು ಮಂದಿಗೆ ನೆರವು ನೀಡಿದ್ದಾರೆ. ಸುಮಾರು ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ 50 ಕಿಟ್‌ಗಳನ್ನು ತೀರಾ ಅಗತ್ಯ ಇರುವವರಿಗೆ ಸ್ವತ: ಇವರೇ ಮನೆಗೆ ಹೋಗಿ ನೀಡಿ ಬಂದಿದ್ದಾರೆ.

‘ಕಳೆದ ವರ್ಷ ಸುಮಾರು 40 ಕಿ.ಮೀ. ದೂರದ ಹೆಬ್ರಿಯಿಂದ ವ್ಯಕ್ತಿಯೊಬ್ಬರು ರಾತ್ರಿ 11ಗಂಟೆಗೆ ಕರೆ ಮಾಡಿ, ಮನೆಯಲ್ಲಿ ಪಡಿತರ ಖಾಲಿಯಾಗಿ ಕಷ್ಟದಲ್ಲಿ ದ್ದೇವೆ ಎಂದು ತಿಳಿಸಿದರು. ಕೂಡಲೇ ಜೀಪಿನಲ್ಲಿ ಅವರ ಮನೆಗೆ ತೆರಳಿ ರಾತ್ರಿ 12 ಗಂಟೆಗೆ ಅಕ್ಕಿ ಸೇರಿದಂತೆ ಅಗತ್ಯ ವಸ್ತು ನೀಡಿ ಬಂದಿದ್ದೇನೆ. ಈ ಬಾರಿ ಸಂಪೂರ್ಣ ಲಾಕ್‌ಡೌನ್ ಇಲ್ಲದ ಕಾರಣ ಕಿಟ್ ನೀಡುವ ಅವಶ್ಯಕತೆ ಕಂಡುಬಂದಿಲ್ಲ’ ಎನ್ನುತ್ತಾರೆ ವೃತ್ತ ನಿರೀಕ್ಷಕ ಮಂಜುನಾಥ್.

ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಮೂಲದ ಮಂಜುನಾಥ್, ಕಳೆದ 25ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷ ಗಳಿಂದ ಉಡುಪಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ದಂಡದ ಬದಲು ಮಾಸ್ಕ್

ಉಳಿದ ಪೊಲೀಸರು ಮಾಸ್ಕ್ ಹಾಕದವರಿಗೆ ಕೇಸು ಹಾಕಿ ದಂಡ ವಿಧಿಸಿದರೆ ಮಂಜುನಾಥ್, ಕೇಸು ಬದಲು ತಮ್ಮಲ್ಲಿರುವ ಮಾಸ್ಕ್ ನೀಡಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

‘ಮಾಸ್ಕ್ ಹಾಕಿಲ್ಲ ಅಂತ ನಾವು ದಂಡ ವಿಧಿಸಿದರೆ ಅವರು ಹಣ ಪಾವತಿಸಿ ಹೋಗುತ್ತಾರೆ. ಆದರೆ ಅವರು ಮಾನಸಿಕವಾಗಿ ಬದಲಾಗುವುದಿಲ್ಲ. ಆದರೆ ಮಾಸ್ಕ್ ನೀಡಿ ಅರಿವು ಮೂಡಿಸಿದರೆ ಅವರು ಜೀವನಪೂರ್ತಿ ಅದನ್ನು ನೆನಪು ಇಟ್ಟುಕೊಂಡು ಪಾಲಿಸುತ್ತಾರೆ’ ಎಂದು ಮಂಜುನಾಥ್ ತಿಳಿಸಿದ್ದಾರೆ.

ಇವರು ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವು ನೀಡುತ್ತಿದ್ದಾರೆ. ಮಕ್ಕಳ ಶಾಲಾ ಶುಲ್ಕ, ಪುಸ್ತಕ ಖರೀದಿ ಹಾಗು ಇತರ ಆರ್ಥಿಕ ನೆರವು ನೀಡುವ ಮೂಲಕ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಕಾಲೇಜುಗಳಿಗೆ ತೆರಳಿ ಆನ್‌ಲೈನ್ ಕ್ಲಾಸ್ ನಡೆಸಿಕೊಡುತ್ತಿದ್ದಾರೆ. ಡ್ರಗ್ಸ್ ವಿರುದ್ಧ, ಸಂಚಾರ ನಿಯಮ, ಸೈಬರ್ ಕ್ರೈಮ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.

‘ನಾನು ಬಾಲ್ಯದಲ್ಲಿ ತುಂಬಾ ಕಷ್ಟಪಟ್ಟು ಓದಿದ್ದೇನೆ. ಆಗ ನನಗೆ ತುಂಬಾ ಜನ ಸಹಾಯ ಮಾಡಿದ್ದಾರೆ. ಈಗ ನಾನು ಅವರಿಗೆ ಸಹಾಯ ಮಾಡಲು ಆಗುವುದಿಲ್ಲ. ಅದಕ್ಕೆ ನನ್ನ ಕಣ್ಣ ಮುಂದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದೇನೆ’

-ಮಂಜುನಾಥ್, ಪೊಲೀಸ್ ವೃತ್ತ ನಿರೀಕ್ಷಕರು, ಉಡುಪಿ


SHARE THIS

Author:

0 التعليقات: