Monday, 3 May 2021

ಮುಲ್ಕಿ -ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನಿಂದ ಕೋವಿಡ್ ಸಂತ್ರಸ್ತರ ಸೇವೆಗೆ ಆಂಬುಲನ್ಸ್ ಕೊಡುಗೆ


 ಮುಲ್ಕಿ -ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನಿಂದ ಕೋವಿಡ್ ಸಂತ್ರಸ್ತರ ಸೇವೆಗೆ ಆಂಬುಲನ್ಸ್ ಕೊಡುಗೆ

ಮಂಗಳೂರು, ಮೇ 5: ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಮುಲ್ಕಿ-ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯ ಆವರಣದಲ್ಲಿಂದು ಚಾಲನೆ ನೀಡಲಾಯಿತು.

ಮಾಜಿ ಸಚಿವ ಅಭಯ ಚಂದ್ರ ಜೈನ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಹಾಗೂ ಮುಲ್ಕಿ-ಮೂಡುಬಿದಿರೆ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ ನೇತೃತ್ವದಲ್ಲಿಂದು ಚಾಲನೆ ನೀಡಲಾಯಿತು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಬಡವರ ನೆರವಿಗಾಗಿ ಮಾಡಿರುವ ವಿವಿಧ ಯೋಜನೆಗಳೇ ಈ ಸಂದರ್ಭದಲ್ಲಿ ನಮಗೆ ಕೋವಿಡ್ ಸಂತ್ರಸ್ತರಿಗೆ ನೆರವು ನೀಡಲು ಪ್ರೇರಣೆ ಎಂದರು.

 ಕೋವಿಡ್ ಸಂತ್ರಸ್ತರು ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ವೆಚ್ಚ ಭರಿಸಲು ತೊಂದರೆಪಡುವುದು, ಅದಕ್ಕಾಗಿ ಆರ್ಥಿಕ ಹೊರೆಯನ್ನು ಭರಿಸಲಾಗದ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ವೊಂದನ್ನು ಶಿರ್ತಾಡಿಯಲ್ಲಿ ಇರಿಸಲಾಗುವುದು‌. ಈ ಆ್ಯಂಬುಲೆನ್ಸ್ ಗಾಗಿ ತಾನು ವೈಯಕ್ತಿಕ 50 ಸಾವಿರ ರೂ. ದೇಣಿಗೆ ನೀಡಿದ್ದು, ಉದ್ಯಮಿ ಶ್ರೀಪತಿ ಆಚಾರ್ಯ 50 ಸಾವಿರ ರೂ. ಹಾಗೂ ಮೂಡುಬಿದಿರೆಯ ಸಮಾಜ ಮಂದಿರದ ವತಿಯಿಂದ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಇದಕ್ಕೆ ಆಕ್ಸಿಜನ್ ಜೋಡಣೆಗೆ ಮೂಡುಬಿದಿರೆಯ ಸಿ.ಎಚ್.ಮೆಡಿಕಲ್ ನವರು ಸಹಾಯ ನೀಡಿದ್ದಾರೆ. ಸೌಹಾರ್ದ ಫ್ರೆಂಡ್ಸ್ ಕ್ಲಬ್ ಈ ಆ್ಯಂಬುಲೆನ್ಸ್ ಸೇವೆಯನ್ನು ಜನರಿಗೆ ತಲುಪಿಸುವ ಕಾರ್ಯ ನಿರ್ವಹಿಸಲಿದೆ. ತುರ್ತು ಆ್ಯಂಬುಲೆನ್ಸ್ ಸೇವೆಗಾಗಿ ಸಂತ್ರಸ್ತರು ಮೊ.ಸಂ.: 9880234766 ಅಥವಾ 9880961354 ಅನ್ನು ಸಂಪರ್ಕಿಸ ಬಹುದು ಎಂದು ಅಭಯ ಚಂದ್ರ ಜೈನ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತುರ್ತಾಗಿ ಆಕ್ಸಿಜನ್ ಸಹಿತ ಬೆಡ್ ಗಳಿರುವ ಕೇಂದ್ರಗಳನ್ನು ಖಾಸಗಿ ಆಸ್ಪತ್ರೆ ಅಥವಾ ಪ್ರತ್ಯೇಕ ಖಾಸಗಿ ಸಂಸ್ಥೆಗಳಲ್ಲಿ ಮಾಡುವ ಅಗತ್ಯವಿದೆ. ಮುಲ್ಕಿ - ಮೂಡುಬಿದಿರೆಯ ಆಸ್ಪತ್ರೆಗಳಿಗೆ ಆಕ್ಸಿಜನ್ ಪೈಪ್ ಲೈನ್  ಜೋಡಣೆಯಾಗಿ ಎರಡು ವರ್ಷಗಳೇ ಕಳೆದರೂ ಆಕ್ಸಿಜನ್ ಸಂಪರ್ಕ ಆಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಮಿಥುನ್ ರೈ ಮಾತನಾಡಿ, ಕಾಂಗ್ರೆಸ್ ವತಿಯಿಂದ ಕೋವಿಡ್ ಯೋಧರ ತಂಡವು ಮುಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. ನಾಳೆಯಿಂದ ಜನರಲ್ಲಿ ಸಾಮಾಜಿಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು. ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಆಕ್ಸಿಜನ್ ಸಹಿತ ಬೆಡ್ ಗಳು ಕೋವಿಡ್ ಸಂತ್ರಸ್ತರಿಂದ ಭರ್ತಿಯಾಗಿವೆ. ಅಲ್ಲಿ 250 ಹಾಸಿಗೆಗಳಿದ್ದರೂ ಆಕ್ಸಿಜನ್ ಸಹಿತ 50  ಹಾಸಿಗೆಗಳನ್ನು ಮಾತ್ರ ಕೋವಿಡ್ ಸಂತ್ರಸ್ತರಿಗೆ ಮೀಸಲಿಡಲಾಗಿದೆ. ಇದು ಸಾಕಾಗುವುದಿಲ್ಲ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರ ಈ ಬಗ್ಗೆ ಗಮನಹರಿಸಿ ಆಕ್ಸಿಜನ್ ಸಹಿತ ಹೆಚ್ಚಿನ ಬೆಡ್ ಗಳ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಲ್ಕಿ-ಮೂಡುಬಿದಿರೆಯ ಕಾಂಗ್ರೆಸ್ ಮುಖಂಡರಾದ ವಸಂತ್ ಬೆರ್ನಾಡ್, ವೆಲೇರಿಯನ್ ಸಿಕ್ವೇರ, ಸಂತೋಷ್ ಶೆಟ್ಟಿ, ಪುರಂದರ ದೇವಾಡಿಗ, ರಾಜೇಶ್ ಕಡಲ್ ಕೆರೆ, ಧನರಾಜ್, ಅರುಣ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: