ಜಾಮಿಯಾ ಮಿಲ್ಲಿಯಾದ ಆರು ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಗೆ ಆಯ್ಕೆ
ಹೊಸದಿಲ್ಲಿ,ಮೇ 23: ಇಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿರುವ ಐವರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ಗೆ ಆಯ್ಕೆಯಾಗಿದ್ದಾರೆ.
ವಿವಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ನಡೆಸುತ್ತಿರುವ ಫೌಝಿಯಾ ತಬಸ್ಸುಮ್, ಮೊಮಿನಾ, ಅಝ್ರಿ ಮಲಿಕ್, ಆಲಿಯಾ ತಯ್ಯಬಾ, ಆಶಿ ಸೈಫ್ ಮತ್ತು ಫಿರೋಝ್ ಖಾನ್ ಅವರು ಲ್ಯಾಟರಲ್ ಎಂಟ್ರಿ ಯೋಜನೆಯಡಿ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್(ಪಿಎಂಆರ್ಎಫ್)ಗೆ ಆಯ್ಕೆಯಾಗಿ ದ್ದಾರೆ ಎಂದು ವಿವಿಯು ತಿಳಿಸಿದೆ.
ಆಯ್ಕೆಯಾದವರಿಗೆ ಪ್ರತ್ಯೇಕವಾಗಿ ಮೊದಲ ಎರಡು ವರ್ಷಗಳಿಗೆ 70,000 ರೂ.,ಮೂರನೇ ವರ್ಷಕ್ಕೆ 75,000 ರೂ.ಹಾಗೂ ನಾಲ್ಕು ಮತ್ತು ಐದನೇ ವರ್ಷಗಳಿಗೆ 80,000 ರೂ.ಗಳ ಫೆಲೋಶಿಪ್ ದೊರೆಯುತ್ತದೆ. ಇದರ ಜೊತೆಗೆ ಪ್ರತಿಯೊಬ್ಬರು ವಾರ್ಷಿಕ ಎರಡು ಲ.ರೂ.ಗಳ(ಐದು ವರ್ಷಗಳಿಗೆ ಒಟ್ಟು 10 ಲ.ರೂ.)ಸಂಶೋಧನಾ ಅನುದಾನವನ್ನು ಪಡೆಯುತ್ತಾರೆ ಎಂದು ಪಿಎಂಆರ್ಎಫ್-ಜೆಎಂಯ ಸಮನ್ವಯಕಾರ ಪ್ರೊ.ಅಬ್ದುಲ್ ಖಯ್ಯೂಮ್ ಅನ್ಸಾರಿ ಅವರು ತಿಳಿಸಿದರು.
ಈ ವಿದ್ಯಾರ್ಥಿಗಳ ಸಾಧನೆಯು ಇತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವಿವಿಯ ವಿದ್ಯಾರ್ಥಿನಿಯರಿಗೆ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಉತ್ತಮ ಸಾಧನೆಗೆ ಸ್ಫೂರ್ತಿ ನೀಡಲಿದೆ ಎಂದು ಕುಲಪತಿ ನಜ್ಮಾ ಅಖ್ತರ್ ಆಶಯ ವ್ಯಕ್ತಪಡಿಸಿದರು.
ಕಳೆದ ವರ್ಷ ಈ ಫೆಲೋಶಿಪ್ಗೆ ವಿವಿಯ ಇಬ್ಬರು ಸಂಶೋಧನಾ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದರು.
0 التعليقات: