Saturday, 1 May 2021

ದೇಶದಲ್ಲಿ ಒಂದು ತಿಂಗಳಲ್ಲಿ 69 ಲಕ್ಷ ಮಂದಿಗೆ ಕೊರೋನ ಸೋಂಕು

 

ದೇಶದಲ್ಲಿ ಒಂದು ತಿಂಗಳಲ್ಲಿ 69 ಲಕ್ಷ ಮಂದಿಗೆ ಕೊರೋನ ಸೋಂಕು

ಹೊಸದಿಲ್ಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಎಪ್ರಿಲ್ ತಿಂಗಳು ಭಾರತದ ಪಾಲಿಗೆ ಮಾರಕ ಎನಿಸಿದ್ದು, ವಿಶ್ವದಲ್ಲೇ ಗರಿಷ್ಠ ಅಂದರೆ 69 ಲಕ್ಷ ಹೊಸ ಪ್ರಕರಣಗಳು ಈ ಅವಧಿಯಲ್ಲಿ ಬೆಳಕಿಗೆ ಬಂದಿವೆ.

ಒಂದೇ ತಿಂಗಳಲ್ಲಿ 48,768 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ಭಾರತದ ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿರುವುದು ಮಾತ್ರವಲ್ಲದೇ ದೇಶದಲ್ಲಿ ಹಿಂದಿನ ಐದು ತಿಂಗಳುಗಳಲ್ಲಿ ಮೃತಪಟ್ಟ ಒಟ್ಟು ಸೋಂಕಿತರ ಸಂಖ್ಯೆಗಿಂತ ಅಧಿಕ.

ಶುಕ್ರವಾರ ದೇಶದಲ್ಲಿ 4,02,351 ಹೊಸ ಕೊರೋನ ಸೋಂಕು ಪ್ರಕರಣಗಳು ವರದಿಯಾಗಿದ್ದು, ವಿಶ್ವದಲ್ಲೇ ಒಂದು ದಿನದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾದ ಏಕೈಕ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ಕೇವಲ ಒಂಬತ್ತು ದಿನಗಳ ಹಿಂದೆ ಅಂದರೆ ಎ. 21ರಂದು ಭಾರತದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿತ್ತು.

ಭಾರತದಲ್ಲಿ ಎಪ್ರಿಲ್‌ನಲ್ಲಿ 69,36,034 ಪ್ರಕರಣಗಳು ವರದಿಯಾಗಿದ್ದು, ಈ ಮುನ್ನ ದೇಶದಲ್ಲಿ ಸಾಂಕ್ರಾಮಿಕ ಅತ್ಯಧಿಕ ಇದ್ದ ಮೂರು ತಿಂಗಳ ಅವಧಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳಿಗಿಂತಲೂ ಅಧಿಕ. ಕಳೆದ ವರ್ಷದ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಒಟ್ಟು 64.9 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ವರದಿಯಾದ ಒಟ್ಟು ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು ಕೇವಲ ಒಂದು ತಿಂಗಳಲ್ಲಿ ದಾಖಲಾಗಿವೆ.

ದೇಶದಲ್ಲಿ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡ ಬಳಿಕ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 36ರಷ್ಟು ಪ್ರಕರಣಗಳು ಮತ್ತು ಶೇಕಡ 23ರಷ್ಟು ಸಾವು ಈ ತಿಂಗಳಲ್ಲೇ ವರದಿಯಾಗಿವೆ. ಇದು ಭಾರತದಲ್ಲಿ ಪರಿಸ್ಥಿತಿ ಎಷ್ಟು ಕರಾಳವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಧನಾತ್ಮಕತೆ ದರ 21.6%ದಷ್ಟು ಇರುವುದು ಅಂದರೆ ಪರೀಕ್ಷೆಗೆ ಒಳಪಡಿಸಿದ ಪ್ರತಿ ಐದು ಮಂದಿಯ ಪೈಕಿ ಒಬ್ಬರಿಗೆ ಸೋಂಕು ಇರುವುದು ಇದನ್ನು ದೃಢಪಡಿಸುತ್ತದೆ.

ಮಹಾರಾಷ್ಟ್ರ (62919), ಕರ್ನಾಟಕ (48,296), ಉತ್ತರ ಪ್ರದೇಶ (34,626), ದೆಹಲಿ (27,047) ಅತ್ಯಧಿಕ ಪ್ರಕರಣಗಳು ವರದಿಯಾಗಿರುವ ರಾಜ್ಯಗಳು. ಶುಕ್ರವಾರ ದೇಶದಲ್ಲಿ 3471 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.


SHARE THIS

Author:

0 التعليقات: