Wednesday, 19 May 2021

ಮೇ 20ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್. ವಾಹನಗಳ ಸಂಚಾರ ಸಂಪೂರ್ಣ ನಿಷೇಧ, ದಿನಸಿ ಅಂಗಡಿಗಳೂ ಬಂದ್


ಮೇ 20ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್. ವಾಹನಗಳ ಸಂಚಾರ ಸಂಪೂರ್ಣ ನಿಷೇಧ, ದಿನಸಿ ಅಂಗಡಿಗಳೂ ಬಂದ್

ಚಿಕ್ಕಮಗಳೂರು, ಮೇ 19: ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳನ್ನು ಹೇರುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮೇ 20ರಂದು ಬೆಳಗ್ಗೆ 10ರಿಂದ ಮೇ 24ರ ಬೆಳಗ್ಗೆ 6ರವರೆಗೆ ಜಿಲ್ಲೆಗೆ ಸೀಮಿತಗೊಳಿಸಿ ಸಂಪೂರ್ಣ ಲಾಕ್‍ಡೌನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಬುಧವಾರ ಸಂಜೆ ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿನ 2ನೇ ಅಲೆ ಭಾರೀ ಅವಾಂತರಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರಕಾರ ಕೊರೋನ ನಿಯಂತ್ರಣಕ್ಕೆ ಜಾರಿ ಮಾಡಿರುವ ಕೊರೋನಾ ಕರ್ಫ್ಯೂ ಜಾರಿ ಸಂದರ್ಭದಲ್ಲಿ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಜನರು ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಹೊರ ಜಿಲ್ಲೆಗಳಿಂದ ಬಂದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕೆಂದು ಸರಕಾರ ಆದೇಶ ಹೊರಡಿಸಿದ್ದರೂ ವಲಸೆ ಬಂದವರು ಬೇಕಾಬಿಟ್ಟಿ ತಿರುಗಾಡಿದ್ದಾರೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂದರು.

ಕಳೆದೊಂದು ವಾರದಲ್ಲಿ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮವೊಂದರಲ್ಲೇ 73 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲಂಪುರ ಗ್ರಾಮದಲ್ಲಿ 123 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಮರಸಣಿಗೆ, ಬಣಕಲ್, ಕಡೂರು ತಾಲೂಕಿನ ಎಮ್ಮೆದೊಡ್ಡಿ, ಯಗಟಿ, ತರೀಕೆರೆ ತಾಲೂಕಿನ ಅಜ್ಜಂಪುರ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ಶತಾಯಗತಾಯ ನಿಯಂತ್ರಿಸಲೇಬೇಕಿದ್ದು, ಈ ಕಾರಣದಿಂದಾಗಿ ಮೇ 20ರ ಬೆಳಗ್ಗೆ 10ರಿಂದ ಮೇ 24ರ ಬೆಳಗ್ಗೆ 6ರವರೆಗೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿಗೆ ಆದೇಶಿಸಲಾಗಿದೆ ಎಂದರು.

ಮೇ 20ರಂದು ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸೂಪರ್ ಮಾರ್ಕೆಟ್‍ಗಳು ಬೆಳಗ್ಗೆಯಿಂದಲೇ ಬಂದ್ ಆಗಿರಲಿವೆ. ಮೇ 20ರಂದು ಬೆಳಗ್ಗೆ 10ರ ಬಳಿಕ ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರ, ಜನಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ತುರ್ತು ವೈದ್ಯಕೀಯ ಸೇವೆ ಪಡೆಯಲು ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ ಇಂತಹ ವ್ಯಕ್ತಿಗಳು ಪೊಲೀಸರಿಗೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಲೇಬೇಕು. ದಾಖಲೆಗಳನ್ನು ತೋರಿಸದಿದ್ದಲ್ಲಿ ಇದಕ್ಕೂ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಈ ಕಠಿಣ ಲಾಕ್‍ಡೌನ್ ಆದೇಶ ಜಿಲ್ಲೆಯಲ್ಲಿ ನಾಲ್ಕು ದಿನಗಳವರೆಗೆ ಮಾತ್ರ ಇರಲಿದೆ. ಮೇ 24ರ ಬಳಿಕ ರಾಜ್ಯ ಸರಕಾರದ ಆದೇಶದ ಪ್ರಕಾರ ಕ್ರಮವಹಿಸಲಾಗುವುದು ಎಂದರು.

ಸಂಪೂರ್ಣ ಲಾಕ್‍ಡೌನ್ ನಾಲ್ಕು ದಿನಗಳ ಕಾಲ ಮಾತ್ರ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಎಲ್ಲ ರೀತಿಯ ವಾಣಿಜ್ಯ ಅಂಗಡಿ ಮುಂಗಟ್ಟುಗಳು, ಕೈಗಾರಿಕೆಗಳೂ ಬಂದ್ ಆಗಿರಲಿವೆ. ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು ಕೋವಿಡ್ ಮಾರ್ಗಸೂಚಿಯಂತೆ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಸರಕಾರಿ ಕಚೇರಿ, ಬ್ಯಾಂಕ್‍ಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದ ಅವರು, ಹಾಲಿನಂಗಡಿ, ಮೆಡಿಕಲ್ ಶಾಪ್, ಆಸ್ಪತ್ರೆ, ಕ್ಲಿನಿಕ್‍ಗಳು, ಪೆಟ್ರೋಲ್‍ಬಂಕ್ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಇವುಗಳ ಸೇವೆ ಪಡೆಯಲು ನಡೆದುಕೊಂಡೇ ಬರಬೇಕು. ವಾಹನಗಳ ಬಳಸಿದಲ್ಲಿ ವಾಹನಗಳನ್ನು ಸೀಝ್ ಮಾಡಲಾಗುವುದು. ಲಾಕ್‍ಡೌನ್ ಅವಧಿಯಲ್ಲಿ ಹೊರ ಜಿಲ್ಲೆಗಳಿಂದ ಬರುವವರು ಚೆಕ್‍ಪೋಸ್ಟ್ ಗಳಲ್ಲಿನ ಸಿಬ್ಬಂದಿಗೆ ತಮ್ಮ ವಿವರಗಳನ್ನು ನೀಡುವುದು ಕಡ್ಡಾಯ. ಹೀಗೆ ಬರುವವರು ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗುವುದೂ ಕಡ್ಡಾಯ ಎಂದರು.

ನಿಗದಿಯಾದ ಮದುವೆಗಳಲ್ಲಿ 10 ಮಂದಿಗೆ ಮಾತ್ರ ಅವಕಾಶ: ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಲು ಮದುವೆ ಸಮಾರಂಭಗಳು, ಶವಸಂಸ್ಕಾರಗಳು ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೇ 20-24ರವರೆಗೆ ಈಗಾಗಲೇ ನಿಗದಿಯಾದ ಮದುವೆ ಕಾರ್ಯಗಳಿಗೆ ಅವಕಾಶ ನೀಡಲಾಗಿದೆಯಾದರೂ ಮದುವೆಗಳಲ್ಲಿ ಕೇವಲ 10 ಮಂದಿ ಮಾತ್ರ ಭಾಗವಹಿಸಬೇಕು. ಹೊಸದಾಗಿ ನಿಶ್ಚಯವಾಗುವ ಮದುವೆ ಸಮಾರಂಭಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಅವಕಾಶವಿಲ್ಲ. ಶವಸಂಸ್ಕಾರ ವಿಧಿಯಲ್ಲಿ 5 ಮಂದಿಗೆ ಮಾತ್ರ ಅವಕಾಶ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೂಪನ್ ವ್ಯವಸ್ಥೆಯಡಿ ಪಡಿತರ ವಿತರಣೆ: ಕಠಿಣ ಲಾಕ್‍ಡೌನ್ ಜಾರಿಯ ಅವಧಿಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡಲು ಅವಕಾಶ ನೀಡಲಾಗಿದೆ. ಆದರೆ ಜನಜಂಗುಳಿ, ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲಕರು ಕೂಪನ್ ವ್ಯವಸ್ಥೆಯಡಿ ಪಡಿತರ ವಿತರಣೆ ಮಾಡಬೇಕು. ಇದನ್ನು ಮೀರಿ ನ್ಯಾಯಬೆಲೆ ಅಂಗಡಿಗಳ ಮುಂದೆ ಜನಜಂಗುಳಿ ಏರ್ಪಟ್ಟಿರುವುದು ಕಂಡು ಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಮೇಶ್ ಎಚ್ಚರಿಸಿದರು.

ಇಂದಿರಾ ಕ್ಯಾಂಟಿನ್ ಸೇವೆ ಅಬಾಧಿತ: ನಾಲ್ಕು ದಿನಗಳ ಲಾಕ್ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್ ಮೂಲಕ ಸಾರ್ವಜನಿಕರಿಗೆ ರಾಜ್ಯ ಸರಕಾರದ ಆದೇಶದಂತೆ ನೀಡಲಾಗುತ್ತಿರುವ ತಿಂಡಿ, ಊಟ ಅಬಾಧಿತವಾಗಿರುತ್ತದೆ. ಇಂದಿರಾ ಕ್ಯಾಂಟಿನ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ದಿನಪತ್ರಿಕೆಗಳ ಸೇವೆ ಎಂದಿನಂತಿರಲಿದ್ದು, ನ್ಯಾಯಾಲಯಗಳು ಉಚ್ಚನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸಲಿವೆ. ಅನಾಥಾಶ್ರಮ, ವೃದ್ಧಾಶ್ರಮಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ರೈತರು, ಕಾರ್ಮಿಕರ ಓಡಾಟಕ್ಕೂ ಬ್ರೇಕ್

ಲಾಕ್‍ಡೌನ್ ಅವಧಿಯಲ್ಲಿ ರೈತರು, ಕಾರ್ಮಿಕರ ಓಡಾಟಕ್ಕೂ ನಿರ್ಬಂಧ ಹೇರಲಾಗಿದೆ. ಇದರಿಂದ ಕಾರ್ಮಿಕರು, ರೈತರಿಗೆ ಸಮಸ್ಯೆಯಾಗುವ ಅರಿವು ನಮಗಿದೆ. ಆದರೆ ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ರೈತರು, ಕಾರ್ಮಿಕರು ಓಡಾಟಕ್ಕೆ ಬ್ರೇಕ್ ಹಾಕಲೇ ಬೇಕು. 4 ದಿನಗಳಲ್ಲಿ ಯಾವ ಕಾರ್ಮಿಕರಿಗೂ ಹೆಚ್ಚು ಸಮಸ್ಯೆಯಾಗಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ರೈತರು, ಕಾರ್ಮಿಕರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು.

- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಇದುವರೆಗೆ ಇಬ್ಬರು ಸೋಂಕಿತರು ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದು, ಒಬ್ಬರು ವೆನ್ಲಾಕ್ ಆಸ್ಪತ್ರೆ, ಮತ್ತೊಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಇನ್ನೂ ಇಬ್ಬರಲ್ಲಿ ಬ್ಲಾಕ್ ಫಂಗಸ್ ಇದೆ ಎನ್ನಲಾಗುತ್ತಿದ್ದು, ಸಿಟಿ ಸ್ಕ್ಯಾನ್ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ

ಹೋಮ್ ಕ್ವಾರಂಟೈನ್ ಆದವರ ಮನೆಗೆ ಸ್ಟಿಕ್ಕರ್

ಜಿಲ್ಲೆಯಲ್ಲಿ ಪಾಸಿಟಿವ್ ಇದ್ದು ಹೋಮ್ ಐಸೋಲೇಶನ್ ಆದವರ ಮನೆಗಳಿಗೆ ಇದುವರೆಗೆ ಸ್ಟಿಕ್ಕರ್ ಅಂಟಿಸಲು ಸರಕಾರದ ಆದೇಶ ಇರಲಿಲ್ಲ. ಸದ್ಯ ಸರಕಾರ ಸ್ಟಿಕ್ಕರ್ ಅಂಟಿಸಲು ಆದೇಶ ನೀಡಿದೆ. ಹೋಮ್ ಐಸೋಲೇಶನ್ ಆದವರ ಮನೆಗಳ ಮುಂದೆ ಇನ್ನು ಮುಂದೆ ಸ್ಟಿಕ್ಕರ್ ಅಂಟಿಸಲಾಗುವುದು. ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಅಗತ್ಯ ಇರುವವರು ಮಾತ್ರ ಮನೆಗಳಿಂದ ಹೊರ ಬರಬೇಕು. ಸುಖಾಸುಮ್ಮನೆ ಹೊರಬಂದು ಜನಜಂಗುಳಿ ಏರ್ಪಟ್ಟರೇ ನಾಲ್ಕು ದಿನಗಳ ಪ್ರಕರಣಗಳು ಒಂದೇ ದಿನ ದಾಖಲಾಗುತ್ತವೆ. ಜನರ ಜಿಲ್ಲಾಡಳಿತ ಕ್ರಮಕ್ಕೆ ಸಹಕಾರ ನೀಡಬೇಕು.SHARE THIS

Author:

0 التعليقات: