Wednesday, 19 May 2021

ಚುನಾವಣೆ ಕರ್ತವ್ಯದ ವೇಳೆ 1,621 ಶಿಕ್ಷಕರ ಸಾವು: ʼಕೇವಲ ಮೂವರು ಮೃತಪಟ್ಟಿದ್ದಾರೆʼ ಎನ್ನುತ್ತಿರುವ ಉತ್ತರಪ್ರದೇಶ ಸರಕಾರ


ಚುನಾವಣೆ ಕರ್ತವ್ಯದ ವೇಳೆ 1,621 ಶಿಕ್ಷಕರ ಸಾವು: ʼಕೇವಲ ಮೂವರು ಮೃತಪಟ್ಟಿದ್ದಾರೆʼ ಎನ್ನುತ್ತಿರುವ ಉತ್ತರಪ್ರದೇಶ ಸರಕಾರ


ಲಕ್ನೋ : ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ನಡೆದ ಪಂಚಾಯತ್ ಚುನಾವಣೆಯಲ್ಲಿ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದ್ದವರ ಪೈಕಿ 1,621  ಮಂದಿ ಶಿಕ್ಷಕರು ಹಾಗೂ ಇತರ ಸಹಾಯಕ ಸಿಬ್ಬಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ ಎಂದು ಶಿಕ್ಷಕರ ಸಂಘಗಳ ಹೇಳಿಕೆಯನ್ನು ನಿರಾಕರಿಸಿರುವ ಉತ್ತರ ಪ್ರದೇಶ ಸರಕಾರ  ಚುನಾವಣಾ ಕರ್ತವ್ಯ ವೇಳೆ ಕೇವಲ ಮೂರು ಮಂದಿ ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

ರಾಜ್ಯದ ಪ್ರಾಥಮಿಕ ಶಿಕ್ಷಕರ ಸಂಘ  ಇತ್ತೀಚೆಗೆ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿ ರಾಜ್ಯ ಪಂಚಾಯತ್ ಚುನಾವಣೆ ಸಂದರ್ಭ 75 ಜಿಲ್ಲೆಗಳಲ್ಲಿ  ಕರ್ತವ್ಯದಲ್ಲಿರುವಾಗ 1,621 ಶಿಕ್ಷಕರು, ಶಿಕ್ಷ ಮಿತ್ರರು ಹಾಗೂ ಉದ್ಯೋಗಿಗಳು ಕೋವಿಡ್‍ನಿಂದ ಮೃತಪಟ್ಟಿದ್ದಾರೆಂದು ಹೇಳಿತ್ತು. ಕೋವಿಡ್ ಎರಡನೇ ಅಲೆಯ ನಡುವೆ ಚುನಾವಣೆ ನಡೆಸುವ ಅಗತ್ಯತೆಯನ್ನೂ ಸಂಘ ಪ್ರಶ್ನಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯದ ಮೂಲಭೂತ ಶಿಕ್ಷಣ ಮಂಡಳಿ, ಚುನಾವಣಾ ಅವಧಿಯೆಂದರೆ ಚುನಾವಣಾ ಕೆಲಸಕ್ಕೆ ಹೊರಡುವುದು, ತರಬೇತಿ ಹೊಂದುವುದು ಹಾವೂ ಕರ್ತವ್ಯ ನಿರ್ವಹಿಸಿ ಮನೆಗೆ ಮರಳುವ ನಡುವಿನ ಅವಧಿಯಾಗಿದೆ. ಈ ಅವಧಿಯಲ್ಲಿ ಕೇವಲ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಮಂಡಳಿ ಹೇಳಿದೆ.

ಆದರೆ ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಕರ ಯೂನಿಯನ್ ಅಧ್ಯಕ್ಷ ದಿನೇಶ್ ಚಂದ್ರ ಶರ್ಮ ಅವರ ಪ್ರಕಾರ ಮೂರನೇ ಹಂತದ ಚುನಾವಣೆ  ನಡೆಯುವ ತನಕ 706 ಶಿಕ್ಷಕರು ಮೃತಪಟ್ಟಿದ್ದರೆ, ಮತ ಎಣಿಕೆ ಮುಗಿಯುವ ವೇಳೆಗೆ ಈ ಸಂಖ್ಯೆ 1600 ಆಗಿತ್ತು.

ಆದರೆ ಸರಕಾರದ ಪ್ರಕಾರ ಕೇವಲ ಮೂವರು ಶಿಕ್ಷಕರು ಮೃತಪಟ್ಟಿದ್ದು ಅವರ ಕುಟುಂಬಗಳಿಗೆ ರೂ 30 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದೆ. ಶಿಕ್ಷಕರ ಯೂನಿಯನ್ ಮಾತ್ರ ಮೃತ ಶಿಕ್ಷಕರ ಕುಟುಂಬಗಳಿಗೆ ರೂ 1 ಕೋಟಿ ಪರಿಹಾರ ಒದಗಿಸಬೇಕೆಂದು ಹೇಳಿದೆ.


 



SHARE THIS

Author:

0 التعليقات: