14 ದಿನ ಲಾಕ್ಡೌನ್: ದ.ಕ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು
ಮಂಗಳೂರು, : ರಾಜ್ಯ ಸರಕಾರ ಜಾರಿಗೆ ತಂದಿರುವ ಎರಡು ವಾರಗಳ ಕಠಿಣ ಲಾಕ್ಡೌನ್ ಸೋಮವಾರದಿಂದ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗಳಿಗೆ ಮುಗಿಬಿದ್ದರು.
ಮಂಗಳೂರಿನ ಮಲ್ಲಿಕಟ್ಟೆ, ನಗರ ಹೊರ ವಲಯದ ತೊಕ್ಕೊಟ್ಟು ಒಳಪೇಟೆ, ತಲಪಾಡಿ ಕೆ.ಸಿ.ರೋಡ್ ನಲ್ಲಿ ಜನರು ಖರೀದಿ ಭರಾಟೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡುಬರುತ್ತಿತ್ತು.
ಖರೀದಿಯ ಭರದಲ್ಲಿ ಜನ ಸುರಕ್ಷಿತ ಅಂತರ, ಮಾಸ್ಕ್ ಧಾರಣೆಯನ್ನು ಮರೆತಿದ್ದರು. ಮಾರುಕಟ್ಟೆಯನ್ನು ಸಂಪರ್ಕಿಸುವ ರಸ್ತೆಗಳಂತೂ ವಾಹನಗಳು ಹಾಗೂ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ನಗರದ ಒಳಭಾಗದ ಸೇರಿದಂತೆ ಎಲ್ಲ ಅಂಗಡಿಗಳು, ಸೂಪರ್, ಹೈಪರ್ ಮಾರುಕಟ್ಟೆ, ತರಕಾರಿ, ಹಣ್ಣು ಹಂಪಲು ಮಾರುಕಟ್ಟೆಗಳ ಎದುರು ಬೆಳಗ್ಗೆ 6 ಗಂಟೆಯಿಂದಲೇ ಖರೀದಿಗಾಗಿ ಸರತಿ ಸಾಲು ಕಂಡುಬಂದಿದ್ದವು. ಅಂಗಡಿಗಳ ಹೊರಗಡೆ ವಾಹನಗಳ ರಾಶಿ ಒಂದೆಡೆಯಾದರೆ, ಒಳಗಡೆ ಬಿಲ್ಲಿಂಗಾಗಿ ಗ್ರಾಹಕರು ಕೆಲ ಅಂಗಡಿ, ಸೂಪರ್ ಬಜಾರ್ ಹಾಗೂ ಮಾರುಕಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು.
0 التعليقات: