Wednesday, 19 May 2021

ಲಾಕ್‍ಡೌನ್: 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ


ಲಾಕ್‍ಡೌನ್: 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಮೇ 19: ಕೋವಿಡ್-19 ಸೋಂಕಿನ ಎರಡನೆ ಅಲೆ ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ದುರ್ಬಲ ವರ್ಗ, ಅಸಂಘಟಿತ ವಲಯದ ಕಾರ್ಮಿಕರು, ಹೂವು, ಹಣ್ಣು-ತರಕಾರಿ ಬೆಳೆಗಾರರು ಸೇರಿದಂತೆ ರೈತರಿಗೆ ಒಟ್ಟು 1,250 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಹೂವು ಬೆಳೆಯುವ ರೈತರಿಗೆ ಹಾನಿಯಾಗಿದ್ದರೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ.ನಂತೆ ಪರಿಹಾರ ನೀಡಲಾಗುವುದು. ಇದರಿಂದ 20 ಸಾವಿರ ರೈತರಿಗೆ ಅನುಕೂಲವಾಗಲಿದ್ದು, ಒಟ್ಟು 12.73 ಕೋಟಿ ರೂ. ಖರ್ಚಾಗುತ್ತದೆ ಎಂದು ತಿಳಿಸಿದರು.

ಹಣ್ಣು-ತರಕಾರಿ ಬೆಳೆಯುವ ರೈತರಿಗೆ ಹೆಕ್ಟೇರ್ ಗೆ 10 ಸಾವಿರ ರೂ. ಸಹಾಯ ನೀಡಲಾಗುವುದು. ಸುಮಾರು 70 ಸಾವಿರ ರೈತರಿಗೆ ಪ್ರಯೋಜನ ಆಗಲಿದ್ದು, ಇದಕ್ಕೆ 69 ಕೋಟಿ ರೂ. ವೆಚ್ಚವಾಗಲಿದೆ. ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ (ಲೈಸನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿ) ತಲಾ 3 ಸಾವಿರ ರೂ.ನಂತೆ ಪರಿಹಾರ ನೀಡಲಾಗುವುದು. ಇದಕ್ಕೆ ಒಟ್ಟು 63 ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕಟ್ಟಡ ಕಾರ್ಮಿಕರಿಗೆ ನೆರವು: ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೀಡಲಾಗುವುದು(ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿದ ಕಾರ್ಮಿಕರಿಗೆ). ಇದಕ್ಕೆ 494 ಕೋಟಿ ರೂ. ಖರ್ಚಾಗುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ 2 ಸಾವಿರ ರೂ.ನೀಡಲಾಗುವುದು. (ಕ್ಷೌರಿಕರು, ಅಗಸರು, ದರ್ಜಿಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕಲ್‍ಗಳು, ಕಂಬಾರರು, ಗೃಹ ಕಾರ್ಮಿಕರು, ಚಮ್ಮಾರರು) ಸುಮಾರು 3.04 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದ್ದು, 60.89 ಕೋಟಿ ರೂ.ವೆಚ್ಚವಾಗಲಿದೆ.

ಬೀದಿಬದಿ ವ್ಯಾಪಾರಿಗಳಿಗೆ 2 ಸಾವಿರ ರೂ.(ಆತ್ಮ ನಿರ್ಭರ್ ನಿಧಿಯಲ್ಲಿ ನೋಂದಣಿ ಹೊಂದಿರುವವರು) ನೀಡಲಾಗುವುದು. 2.20 ಲಕ್ಷ ಜನರಿಗೆ ಇದರ ಪ್ರಯೋಜನ ದೊರೆಯಲಿದ್ದು, ಒಟ್ಟು 44 ಕೋಟಿ ರೂ.ಖರ್ಚಾಗಲಿದೆ. ರಾಜ್ಯದಲ್ಲಿನ ಕಲಾವಿದರು ಮತ್ತು ಕಲಾತಂಡಗಳಿಗೆ 3 ಸಾವಿರ ರೂ.ನೀಡಲಾಗುವುದು. 16,095 ಮಂದಿಗೆ ಪ್ರಯೋಜನ ಸಿಗಲಿದ್ದು, 4.82 ಕೋಟಿ ರೂ.ಖರ್ಚಾಗಲಿದೆ ಎಂದು ಯಡಿಯೂರಪ್ಪ ವಿವರ ನೀಡಿದರು.

ಸಾಲ ಮರುಪಾವತಿ ಅವಧಿ ವಿಸ್ತರಣೆ: ರೈತರು ಮತ್ತು ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಕಂತಿನ ಮರುಪಾವತಿಯನ್ನು 2021 ಜುಲೈ 31ರವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿನ ಬಡ್ಡಿ ಮೊತ್ತವನ್ನು ಸರಕಾರವೇ ಪಾವತಿಸಲಿದ್ದು, ಇದಕ್ಕೆ 134.38 ಕೋಟಿ ರೂ.ವೆಚ್ಚವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಬಿಪಿಎಲ್ ಕುಟುಂಬಗಳಿಗೆ ಅಕ್ಕಿ: ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಮೇ ಮತ್ತು ಜೂನ್ ತಿಂಗಳು ತಲಾ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ರಾಜ್ಯ ಸರಕಾರದ ವತಿಯಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ತಲಾ 10 ಕೆ.ಜಿ ಧಾನ್ಯ ಮತ್ತು ಎಪಿಎಲ್ ಕಾರ್ಡ್‍ದಾರರಿಗೆ 15 ರೂ.ದರದಲ್ಲಿ 10 ಕೆ.ಜಿ ಆಹಾರಧಾನ್ಯವನ್ನು ನೀಡಲಾಗುವುದು. ಇದಕ್ಕೆ 180 ಕೋಟಿ ರೂ.ವೆಚ್ಚವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‍ನಲ್ಲಿ ಬಡವರಿಗೆ ಉಚಿತ ಆಹಾರ ವಿತರಿಸಲಾಗುವುದು. ಪ್ರತಿದಿನ 6 ಲಕ್ಷ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ. ಇದಕ್ಕಾಗಿ 25 ಕೋಟಿ ರೂ. ಖರ್ಚಾಗಲಿದೆ ಎಂದು ಅವರು ವಿವರಿಸಿದರು.

956 ಕೋಟಿ ರೂ.ಖರ್ಚು: ಕೋವಿಡ್ ಮೊದಲ ಮತ್ತು ಎರಡನೆ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಟ್ಟು 2.06 ಲಕ್ಷ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಸರಕಾರದಿಂದ 956 ಕೋಟಿ ರೂ.ಭರಿಸಲಾಗಿದೆ. ಇದೀಗ 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡಲಿದ್ದು, ಇದಕ್ಕಾಗಿ 3 ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, 1 ಸಾವಿರ ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರಕಾರವೇ ಉಚಿತವಾಗಿ ಕೋವಿಡ್ ಲಸಿಕೆ ನೀಡುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು.

ಮೂರು ದಿನಗಳಲ್ಲಿ 2,150 ವೈದ್ಯರ ನೇಮಕ: ಕೋವಿಡ್ ನಿರ್ವಹಣೆಗೆ ಎಸ್‍ಡಿಆರ್‍ಎಫ್ ಹಣದಲ್ಲಿ ಪ್ರತಿ ಗ್ರಾ.ಪಂ.ಗೆ 50 ಸಾವಿರ ರೂ.ನೀಡಲಾಗುತ್ತಿದ್ದು, ಒಟ್ಟು ಆರು ಸಾವಿರ ಗ್ರಾ.ಪಂ.ಗಳಿಗೆ ಇದರ ಲಾಭ ಸಿಗಲಿದೆ. ಇನ್ನು ಮೂರು ದಿನಗಳಲ್ಲಿ 2,150 ವೈದ್ಯರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ. ಲೈನ್‍ಮನ್‍ಗಳು, ಗ್ಯಾಸ್ ಸಿಲಿಂಡರ್ ಮನೆಗಳಿಗೆ ಸಾಗಿಸುವವರು ಮತ್ತು ಶಿಕ್ಷಕರನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಲಾಗಿದ್ದು, ಅವರೆಲ್ಲರಿಗೂ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.



SHARE THIS

Author:

0 التعليقات: