Tuesday, 4 May 2021

ಕೊರೋನ ಕರ್ಫ್ಯೂ ವಿಸ್ತರಣೆ ಬಗ್ಗೆ ಮೇ 12ರ ನಂತರ ತೀರ್ಮಾನ: ಮುಖ್ಯಮಂತ್ರಿ ಯಡಿಯೂರಪ್ಪ


ಕೊರೋನ ಕರ್ಫ್ಯೂ ವಿಸ್ತರಣೆ ಬಗ್ಗೆ ಮೇ 12ರ ನಂತರ ತೀರ್ಮಾನ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಜೊತೆಗೆ, ಹಿರಿಯ ಸಚಿವರಿಗೆ ಔಷಧ, ಆಕ್ಸಿಜನ್, ಹಾಸಿಗೆಗಳ ಸೌಲಭ್ಯ ಹೊಂದಿಸುವ ಹೊಣೆಗಾರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮರಾಜನಗರ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರಿಗೆ ತನಿಖೆಯ ಜವಾಬ್ದಾರಿ ನೀಡಿದ್ದು, ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಚಿವರೊಂದಿಗೆ ಇಂದು ಸವಿಸ್ತಾರವಾಗಿ ಚರ್ಚೆ ಮಾಡಲಾಗಿದೆ. ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಯಲ್ಲಿ ನಾಳೆಯಿಂದಲೆ ಮೊಕ್ಕಾಂ ಹೂಡಬೇಕು. ರೆಮ್‌ಡಿಸಿವಿರ್, ಆಕ್ಸಿಜನ್, ಹಾಸಿಗೆ ಸೇರಿದಂತೆ ಕೋವಿಡ್ ನಿರ್ವಹಣೆ ಸಂಬಂಧ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹಿರಿಯ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಆಕ್ಸಿಜನ್ ಹಂಚಿಕೆಯ ಹೊಣೆ ನೀಡಲಾಗಿದೆ. ಮಾನವ ಸಂಪನ್ಮೂಲ, ರೆಮ್‌ಡಿಸಿವಿರ್ ಸೇರಿದಂತೆ ಅಗತ್ಯ ಔಷಧಗಳ ಕೊರತೆಯಾಗದಂತೆ ಔಷಧಿಗಳನ್ನು ತಯಾರಿಸುವ ಕಂಪೆನಿಗಳೂ, ಸರಬರಾಜು ಮಾಡುವ ಕಂಪನಿಗಳ ಜೊತೆ ಸತತವಾಗಿ ಸಂಪರ್ಕವಿರಿಸಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನರ್ಸಿಂಗ್ ಕಾಲೇಜುಗಳಲ್ಲಿ ಸಮನ್ವಯ ಸಾಧಿಸಿ, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸ್ಗಳನ್ನು ಕೋವಿಡ್ ನಿರ್ವಹಣೆ ಕಾರ್ಯಕ್ಕೆ ತೆಗೆದುಕೊಳ್ಳಬೇಕು. ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗದಂತೆ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು. 

ಅದೇ ರಿತಿ ಕೋವಿಡ್ ವಾರ್ ರೂಮ್, ಕಾಲ್ ಸೆಂಟರ್ ನಿರ್ವಹಣೆಯ ಹೊಣೆಗಾರಿಕೆಯನ್ನು ಅರಣ್ಯ ಸಚಿವ ಅರವಿಂದ ಲಿಂಬಾವಳಿಗೆ ವಹಿಸಲಾಗಿದೆ. ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ಸಿಬ್ಬಂದಿ, ವೈದರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹೊರ ರಾಜ್ಯಗಳಿಂದ ಆಕ್ಸಿಜನ್ ತಡವಾಗಿ ಬರುತ್ತಿರುವುದರಿಂದ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. 350 ಮೆಟ್ರಿಕ್ ಟನ್ ಇದ್ದ ಆಕ್ಸಿಜನ್ ಹಂಚಿಕೆ ಪ್ರಮಾಣ 850 ಮೆಟ್ರಿಕ್ ಟನ್ ಗೆ ಕೇಂದ್ರ ಸರಕಾರ ಹೆಚ್ಚಳ ಮಾಡಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವುದರಿಂದ ಜಿಂದಾಲ್ ಸಂಸ್ಥೆಯಿಂದ ಮಹಾರಾಷ್ಟ್ರಕ್ಕೆ ಹಂಚಿಕೆಯಾಗಿರುವ ಆಕ್ಸಿಜನ್ ಅನ್ನು ನಮ್ಮ ರಾಜ್ಯಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಪಿಯೂಶ್ ಗೋಯಲ್‌ಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ರೆಮ್‌ಡಿಸಿವಿರ್ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ, ಅಕ್ರಮವಾಗಿ ಆಕ್ಸಿಜನ್ ದಾಸ್ತಾನು ಮಾಡುವುದು ಸೇರಿದಂತೆ ಅವ್ಯವಹಾರ ನಡೆದರೆ ಯಾರು ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಕ್ಷಮಿಸುವ ಪ್ರಶ್ನೇಯೇ ಇಲ್ಲ. ಅಮಾನತ್ತು ಮಾಡಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಚಾಮರಾಜನಗರ ಘಟನೆಗೆ ಸಂಬಂಧಿಸಿದಂತೆ ತಮ್ಮ ಹಾಗೂ ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯಗೆ ನನ್ನ ರಾಜೀನಾಮೆ ಕೇಳುವುದೇ ಒಂದು ಕೆಲಸ. ಅವರ ಬಳಿ ಸಲಹೆಗಳು ಇದ್ದರೆ ಕೊಡಲಿ. ರಾಜೀನಾಮೆ ಇಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ ಎಂದರು.

ಮೇ 12ರ ನಂತರ ತೀರ್ಮಾನ: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಮೇ 12ರವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆನಂತರ, ಇದನ್ನು ಮುಂದುವರೆಸಬೇಕೆ, ಬೇಡವೇ ಎಂಬುದರ ಕುರಿತು ಅಧಿಕಾರಿಗಳು, ಸಚಿವರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.SHARE THIS

Author:

0 التعليقات: