ಉದ್ಯಮಿಗಳ ನಿಯಂತ್ರಣದಲ್ಲಿರುವ ಕೇಂದ್ರ ಸರಕಾರ ಶೀಘ್ರ ಪತನವಾಗಲಿದೆ: ರಾಕೇಶ್ ಟಿಕಾಯತ್
ಗಾಂಧೀನಗರ, ಎ.5: ಕೃಷಿ ಕಾಯ್ದೆಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಕೇಂದ್ರ ಸರಕಾರವನ್ನು ಉದ್ಯಮಿಗಳು ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಹೊಸ ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಅಭಿಯಾನದ ಅಂಗವಾಗಿ ಗುಜರಾತ್ಗೆ 2 ದಿನದ ಭೇಟಿ ನೀಡಿರುವ ಟಿಕಾಯತ್, ಸೋಮವಾರ ವಡೋದರದಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರಕಾರ ಇದರಲ್ಲಿ ವಿಫಲವಾಗಿದೆ. ಇದರಿಂದ ಹತಾಶರಾಗಿರುವ ಯುವಜನತೆ ನಮ್ಮ ಪ್ರತಿಭಟನೆಗೆ ಕೈಜೋಡಿಸಲು ಮುಂದೆ ಬಂದಿದ್ದಾರೆ.
ರೈತರ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವಲ್ಲಿ ಮಗ್ನವಾಗಿರುವ ಕೇಂದ್ರ ಸರಕಾರ, ಅಮುಲ್ ನಂತಹ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ನಾಶಗೊಳಿಸುವ ಯೋಜನೆಯನ್ನು ಈಗಾಗಲೇ ರೂಪಿಸಿದೆ. ರೈತರ ಪ್ರತಿಭಟನೆ ದೇಶದ ಇತರೆಡೆ ಹರಡುತ್ತಿರುವ ಬಗ್ಗೆ ಸರಕಾರ ಹೆದರಿದೆ. ನಮ್ಮ ಸಂದೇಶ ದೇಶದೆಲ್ಲೆಡೆ ತೀವ್ರವಾಗಿ ಪ್ರಸಾರಗೊಳ್ಳುತ್ತಿರುವುದು ಸರಕಾರಕ್ಕೆ ಆತಂಕ ಮೂಡಿಸಿದೆ. ಗುಜರಾತ್ನಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ. ಗುಜರಾತ್ನ ರೈತರ ಧ್ವನಿಯನ್ನು ಮುನ್ನೆಲೆಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಗುಜರಾತ್ ನಾದ್ಯಂತ ರೈತರ ಹಕ್ಕುಗಳಿಗೆ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಟಿಕಾಯತ್ ಹೇಳಿದರು. ಮಾಜಿ ಮುಖ್ಯಮಂತ್ರಿ ಶಂಕರಸಿನ್ಹ ವೇಲಾ ಹಾಗೂ ಇತರ ಮುಖಂಡರು ಟಿಕಾಯತ್ ಜತೆಗಿದ್ದರು. ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
0 التعليقات: