Wednesday, 28 April 2021

ಕೋವಿಡ್ ಸುನಾಮಿ: ಆಸ್ಪತ್ರೆ, ಸ್ಮಶಾನಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

 

ಕೋವಿಡ್ ಸುನಾಮಿ: ಆಸ್ಪತ್ರೆ, ಸ್ಮಶಾನಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬುಧವಾರ ಎರಡು ಲಕ್ಷದ ಗಡಿ ದಾಟಿದ್ದು, ಕಳೆದ ಒಂದು ವಾರದಿಂದ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಈ ಕೊರೋನ ವೈರಸ್ ಸುನಾಮಿಯಿಂದಾಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ, ವೈದ್ಯಕೀಯ ಸಲಕರಣೆಗಳ ಕೊರತೆ ವ್ಯಾಪಕವಾಗಿ ಕಾಡುತ್ತಿದ್ದು, ಆರೋಗ್ಯ ಸೇವಾ ಕ್ಷೇತ್ರ ಹಾಗೂ ಸ್ಮಶಾನಗಳ ಮೇಲೆ ಭಾರೀ ಹೊರೆ ಬಿದ್ದಿವೆ.

ಜನ ಬೀದಿಗಳಲ್ಲಿ ಸಾಯುತ್ತಿರುವ, ಹತಾಶ ಕುಟುಂಬಗಳು ಚಿಕಿತ್ಸೆ ಮತ್ತು ವೈದ್ಯಕೀಯ ಸಲಕರಣೆಗಳಿಗಾಗಿ ಆಸ್ಪತ್ರೆಗಳ ಹೊರಗೆ ಮತ್ತು ಫಾರ್ಮಸಿಗಳ ಮುಂದೆ ಹಪಹಪಿಸುತ್ತಿರುವ ಕರುಣಾಜನಕ ದೃಶ್ಯಗಳು ದೇಶದ ವಿವಿಧೆಡೆಗಳಿಂದ ವರದಿಯಾಗುತ್ತಿವೆ.

 ಭಾರತದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,79,97,267ಕ್ಕೇರಿದ್ದು, ಸಾವಿನ ಸಂಖ್ಯೆ ಎರಡು ಲಕ್ಷವನ್ನು ಮೀರಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ವಿಶಾಖಪಟ್ಟಣಂನ ಅತಿದೊಡ್ಡ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ನಿನ್ನೆ ಏದುಸಿರು ಬಿಡುತ್ತಿದ್ದ ಮಗುವನ್ನು ಕೋವಿಡ್-19 ಚಿಕಿತ್ಸೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆ ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಮಗು ಆಸ್ಪತ್ರೆಯ ಹೊರಗೆಯೇ ಪ್ರಾಣ ಬಿಟ್ಟ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಪುಟ್ಟ ಬಾಲಕಿಯ ತಂದೆ ಆಮ್ಲಜನಕ ಪಂಪ್ ಮಾಡುತ್ತಿರುವ ಹಾಗೂ ತಾಯಿ ಅಸಹಾಯಕವಾಗಿ ರೋದಿಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. "ದಯವಿಟ್ಟು ನನ್ನ ಮಗುವನ್ನು ಕಾಪಾಡಿ. ಆಸ್ಪತ್ರೆಯವರು ಆಕೆಯನ್ನು ಬೀದಿಯಲ್ಲಿ ಬೀಳಿಸಿದ್ದಾರೆ. ಇದಕ್ಕಾಗಿ ನೀವು ವೈದ್ಯರಾಗಿದ್ದೀರಾ?" ಎಂದು ತಾಯಿ ಉಮಾ (23) ರೋದಿಸುತ್ತಿದ್ದರು.

ಲಕ್ನೋದಲ್ಲಿ ರಾಜೇಂದ್ರ ಕರಣ್ ಎಂಬವರಿಗೆ ಕೋವಿಡ್-19 ಸೋಂಕಿನಿಂದಾಗಿ ಉಸಿರಾಟ ತೊಂದರೆ ತೀವ್ರವಾದಾಗ ಆ್ಯಂಬುಲೆನ್ಸ್‌ಗೆ ಕಾಯದೇ ಮಗ ಸ್ವಂತ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ, ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಯ ನೋಂದಣಿ ಚೀಟಿ ಇಲ್ಲ ಎಂಬ ಕಾರಣಕ್ಕಾಗಿ ಚಿಕಿತ್ಸೆ ನಿರಾಕರಿಸಲಾಯಿತು. ಕೊನೆಗೂ ಹರಸಾಹಸ ಮಾಡಿ ಮಗ ಅದನ್ನು ತರುವ ವೇಳೆಗೆ ಆಸ್ಪತ್ರೆಯ ಬಾಗಿಲ ಮುಂದೆಯೇ ಕಾರಿನಲ್ಲಿ ರಾಜೇಂದ್ರ ಕರಣ್ ಕೊನೆಯುಸಿರೆಳೆದರು.

ಇಂಥ ದೃಶ್ಯಗಳು ದೇಶದ ವಿವಿಧೆಡೆಗಳಿಂದ ವರದಿಯಾಗುತ್ತಿವೆ.


SHARE THIS

Author:

0 التعليقات: