Monday, 12 April 2021

ಅಮೆರಿಕ ಪೊಲೀಸರಿಂದ ಇನ್ನೋರ್ವ ಕರಿಯ ಯುವಕನ ಹತ್ಯೆ; ಭುಗಿಲೆದ್ದ ಪ್ರತಿಭಟನೆ


ಅಮೆರಿಕ ಪೊಲೀಸರಿಂದ ಇನ್ನೋರ್ವ ಕರಿಯ ಯುವಕನ ಹತ್ಯೆ; ಭುಗಿಲೆದ್ದ ಪ್ರತಿಭಟನೆ

ಮಿನಿಯಪೊಲಿಸ್: ಅಮೆರಿಕದ ಮಿನಿಯಪೊಲಿಸ್ ನಗರದ ಉಪನಗರವೊಂದರಲ್ಲಿ ರವಿವಾರ ರಾತ್ರಿ ಕರಿಯ ಯುವಕನೊಬ್ಬನನ್ನು ಪೊಲೀಸರು ಗುಂಡು ಹಾರಿಸಿ ಕೊಂದ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿವೆ.

ಯುವಕ ಮೃತಪಟ್ಟ ಬೆನ್ನಿಗೇ ಪೊಲೀಸ್ ಠಾಣೆಯ ಎದುರು ನೂರಾರು ಮಂದಿ ಜಮಾಯಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ‘ಫ್ಲಾಶ್ ಬ್ಯಾಂಗ್’ (ತೀವ್ರ ಬೆಳಕು ಮತ್ತು ಅಗಾಧ ಸದ್ದು ಉತ್ಪಾದಿಸುವ ಸಾಧನ)ಗಳನ್ನು ಬಳಸಿದರು.

20 ವರ್ಷದ ಕರಿಯ ಯುವಕ ಡಾಂಟ್ ರೈಟ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಯುವಕ.

ನನ್ನನ್ನು ಪೊಲೀಸರು ಹಿಡಿದಿಟ್ಟುಕೊಂಡಿದ್ದಾರೆ ಎಂಬುದಾಗಿ ಡಾಂಟ್ ರೈಟ್ ನನಗೆ ಫೋನ್ ಮಾಡಿ ಹೇಳಿದ್ದಾನೆ ಎಂದು ಅವರ ತಾಯಿ ಕೇಟೀ ರೈಟ್ ರವಿವಾರ ಸಂಜೆ ಜನರ ಗುಂಪೊಂದಕ್ಕೆ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ‘‘ಫೋನ್ ಕೆಳಗಿಡುವಂತೆ ಪೊಲೀಸರು ನನ್ನ ಮಗನಿಗೆ ಹೇಳುತ್ತಿರುವುದು ನನಗೆ ಕೇಳಿಸಿತು. ಬಳಿಕ ಓರ್ವ ಪೊಲೀಸ್ ಅಧಿಕಾರಿ ಫೋನ್ ಕರೆಯನ್ನು ಕಡಿತಗೊಳಿಸಿದರು. ಅವನಿಗೆ ಗುಂಡು ಹಾರಿಸಲಾಗಿದೆ ಎಂಬುದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಅವರ ಗೆಳತಿ ನನಗೆ ಹೇಳಿದಳು’’ ಎಂದು ಕೇಟೀ ಹೇಳಿದರು.

ಸಾರಿಗೆ ನಿಯಮ ಉಲ್ಲಂಘನೆಗಾಗಿ ತಡೆದ ಪೊಲೀಸರು:

ಸಾರಿಗೆ ನಿಯಮ ಉಲ್ಲಂಘನೆಗಾಗಿ ಪೊಲೀಸರು ಕಾರಿನ ಚಾಲಕನೊಬ್ಬನನ್ನು ತಡೆದು ನಿಲ್ಲಿಸಿದರು ಎಂದು ಬ್ರೂಕ್‌ಲಿನ್ ಸೆಂಟರ್ ಪೊಲೀಸ್ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆತನ ವಿರುದ್ಧ ಈಗಾಗಲೇ ಬಂಧನ ವಾರಂಟೊಂದು ಚಾಲ್ತಿಯಲ್ಲಿರುವುದನ್ನು ಮನಗಂಡ ಪೊಲೀಸರು ಆತನ ಬಂಧನಕ್ಕೆ ಮುಂದಾದರು ಎಂದು ಪೊಲೀಸರು ಹೇಳಿದ್ದಾರೆ. ಆತ ತನ್ನ ಕಾರನ್ನೇರಿದಾಗ ಪೊಲೀಸ್ ಅಧಿಕಾರಿಯೊಬ್ಬರು ಅವನತ್ತ ಗುಂಡು ಹಾರಿಸಿದರು. ಆಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದಿದ್ದಾರೆ.


 



SHARE THIS

Author:

0 التعليقات: