Monday, 19 April 2021

ಕೊರೋನ ನಿಯಂತ್ರಣ ಕ್ರಮಕ್ಕೆ ಸಂಬಂಧಿಸಿ ಅಧಿಕಾರಿಗಳು-ಜನಪ್ರತಿನಿಧಿಗಳ ನಡುವೆ ಸಮನ್ವಯತೆಯ ಕೊರತೆ: ರೈ


 ಕೊರೋನ ನಿಯಂತ್ರಣ ಕ್ರಮಕ್ಕೆ ಸಂಬಂಧಿಸಿ ಅಧಿಕಾರಿಗಳು-ಜನಪ್ರತಿನಿಧಿಗಳ ನಡುವೆ ಸಮನ್ವಯತೆಯ ಕೊರತೆ: ರೈ

ಮಂಗಳೂರು: ಬಾಯಿಮಾತಿನ ಉಪಚಾರದಿಂದ ಕೊರೋನ ನಿಯಂತ್ರಣ ಆಗದು. ಸರಕಾರ ಕೇವಲ ಇಂತಹ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಕೊರೋನ ನಿಯಂತ್ರ ಕ್ರಮಗಳಿಗೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯತೆಯ ಕೊರತೆ ಇದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ರಮಾನಾಥ ರೈ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾಡಳಿತ ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

 ದೇಶ ಹಾಗೂ ರಾಜ್ಯದ ಸರಕಾರ ವಚನಭ್ರಷ್ಟ ಸರಕಾರಗಳು ಎಂದು ಆರೋಪಿಸಿದ ಮಾಜಿ ಸಚಿವ ರೈ, ಕಳೆದ ವರ್ಷವೂ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಸಹಕಾರವಾಗಿದ್ದು, ಸಿದ್ಧರಾಮಯ್ಯ ನೇತೃತ್ವದ ಸರಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳಿಂದ. ದೇಶದಲ್ಲಿ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಜಾರಿಗೆ ತರಲಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಹಾಗೂ ಎನ್‌ಆರ್‌ಎಚ್‌ಎಂನಂತಹ ಯೋಜನೆಗಳು ಜನಸಾಮಾನ್ಯರಿಗೆ ಸಹಕಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆಗೆ ಗೆಲ್ಲುವುದು ಮಾತ್ರವೇ ಮುಖ್ಯವಾಗಿದ್ದು, ಕೊರೋನ ಸಮಸ್ಯೆಯಾಗಿಯೇ ಕಾಣುತ್ತಿಲ್ಲ ಎಂದು ಹೇಳಿದರು.

ಸಿ.ಟಿ. ರವಿ ಕುಲಗೋತ್ರ ಗೊತ್ತಿಲ್ಲದ ಮನುಷ್ಯ!

ನಾಯಕರೆಂದರೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಎಂಬ ಸಿ.ಟಿ.ರವಿ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಮಾಜಿ ಸಚಿವ ರೈ, ಯುಪಿಎ ಅಧ್ಯಕ್ಷರಾಗಿದ್ದಾಗ ಮಿತ್ರ ಪಕ್ಷಗಳು ಒತ್ತಾಯಿಸಿದರೂ ಸೋನಿಯಾ ಗಾಂಧಿ ತಮಗೆ ಒಲಿದು ಬಂದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದವರು. ದೇಶಕ್ಕಾಗಿ ರಾಜೀವ್‌ ಗಾಂಧಿ ಹಾಗೂ ಇಂದಿರಾ ಗಾಂಧಿ ಪ್ರಾಣ ತ್ಯಾಗ ಮಾಡಿದವರು. ಅವರ ಪೀಳಿಗೆಯವರು ರಾಹುಲ್ ಗಾಂಧಿ. ಆದರೆ ಸಿ.ಟಿ. ರವಿ ಕುಲಗೋತ್ರ ಗೊತ್ತಿಲ್ಲದ ಮನುಷ್ಯ ಎಂದು ಟೀಕಿಸಿದರು.

ಕಾಂಗ್ರೆಸ್ ಮುಳುಗುವ ಹಡಗು ಎಂಬ ಬಿಜೆಪಿ ನಾಯಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇವರ ಅಜ್ಜಪಿಜ್ಜಂದಿರು ಆ ಹಡಗಿನಲ್ಲಿಯೇ ಕುಳಿತು ಇಲ್ಲಿಯವರೆಗೆ ಬಂದಿರಬಹುದು. ಇವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಬೇಡ, ಇವರ ಪಕ್ಷದಲ್ಲಿ ಹೆಗ್ಗಣ ಸತ್ತು ವಾಸನೆ ಬರುತ್ತಿದೆ. ಅದರ ಬಗ್ಗೆ ಯೋಚಿಸಲಿ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ನಾಯಕರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ನವೀನ್ ಡಿಸೋಜ, ಟಿ.ಕೆ.ಸುಧೀರ್, ಹರಿನಾಥ್, ಪೃಥ್ವಿರಾಜ್, ಅಪ್ಪಿಲತಾ, ನೀರಜ್‌ಪಾಲ್, ಭಾಸ್ಕರ್ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: