Saturday, 17 April 2021

ಸುಳ್ಯ: ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿ ಮಸ್ಜಿದ್ ‌ನಲ್ಲಿ ಮರಣ


 ಸುಳ್ಯ: ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿ ಮಸ್ಜಿದ್ ‌ನಲ್ಲಿ ಮರಣ

ಸುಳ್ಯ: ರಮಝಾನ್‌ನ ಮತ ಪ್ರವಚನ (ಉರ್ದಿ) ನೀಡಲು ಬಂದಿದ್ದ ವಿದ್ಯಾರ್ಥಿಯೊಬ್ಬ ಮಸೀದಿಯಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಗರದ ಹೊರವಲಯದ ಮರಕಡದಲ್ಲಿ ನಡೆದಿದೆ.

ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ ಹಾಜಿ-ಝಹುರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.

ಸಾಮಾನ್ಯವಾಗಿ ದರ್ಸ್ ವಿದ್ಯಾರ್ಥಿಗಳು ರಮಝಾನ್‌ನಲ್ಲಿ ಮತ ಪ್ರವಚನದ (ಉರ್ದಿ) ತರಬೇತಿ ಪಡೆಯಲು ಮಸ್ಜಿದ್'ಗಳಿಗೆ ತೆರಳುವುದು ವಾಡಿಕೆ. ಅದರಂತೆ ಸಿನಾನ್ ಕೂಡ ಶುಕ್ರವಾರ ಮುಸ್ಸಂಜೆ ನಗರ ಹೊರವಲಯದ ಮರಕಡದ ಜುಮಾ ಮಸೀದಿಗೆ ತೆರಳಿದ್ದರು. ಉಪವಾಸ ವೃತ ತೊರೆದು, ತರಾವೀಹ್ ನಮಾಜ್ ಮುಗಿಸಿ ಮತ ಪ್ರವಚನವನ್ನೂ (ಉರ್ದಿ) ನೀಡಿದ್ದರು.

ಇಂದು ಬೆಳಗ್ಗೆ ಸಹರಿಗೆ ಎದ್ದು ಊಟ ಮಾಡಿದ ಬಳಿಕ ಊಟದ ತಟ್ಟೆ ತೊಳೆಯುತ್ತಿದ್ದಾಗ ಸಿನಾನ್ ಕುಸಿದು ಬಿದ್ದಿದ್ದರು. ಮರಕಡ ಜುಮಾ ಮಸೀದಿಯ ಖತೀಬ್ ಇಸಾಕ್ ಸಖಾಫಿ ಕೂಡ ಸಿನಾನ್‌ನ ಸಂಬಂಧಿಯಾಗಿದ್ದು, ಈತನಿಗೆ ಅಪಸ್ಮಾರ ರೋಗವಿರುವ ಬಗ್ಗೆ ತಿಳಿದಿದ್ದ ಅವರು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರ ಸೂಚನೆಯ ಮೇರೆಗೆ ಕುಸಿದು ಬಿದ್ದಿದ್ದ ಸಿನಾನ್‌ನನ್ನು ಅಲ್ಲೇ ಮಲಗಲು ವ್ಯವಸ್ಥೆ ಕಲ್ಪಿಸಿದ್ದರು. ಆದರೆ 8 ಗಂಟೆಯಾದರೂ ಎದ್ದೇಳದ ಕಾರಣ ಮನೆಯವರ ಗಮನಕ್ಕೆ ತರಲಾಯಿತು. ಮತ್ತೆ ಅವರ ಸೂಚನೆಯ ಮೇರೆಗೆ ಇಸಾಕ್ ಸಖಾಫಿಯವರು ಸಿನಾನ್‌ನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಸಿನಾನ್ ಮಲಗಿದಲ್ಲೇ ಮೃತಪಟ್ಟಿದ್ದರು.

ಇವರು ಮುಹಿಮ್ಮಾತ್ ಪೂರ್ವ ವಿದ್ಯಾರ್ಥಿ ಆಗಿದ್ದರು, ಮುಹಿಮ್ಮಾತ್ ಹಿಫ್'ಳುಲ್ ಕುರ್ಆನ್ ನಲ್ಲಿ ಕುರ್ಆನ್ ಹಿಫ್'ಳ್ ಮಾಡಿದ್ದರು. ಈಗ, ಕುಂಬ್ರ ಕೆಐಸಿ ದ್ವಿತೀಯ ತರಗತಿಯ ವಿದ್ಯಾರ್ಥಿಯಾಗಿ ಬಿಕಾಂ ಕಲಿಯುತ್ತಿದ್ದರು. ಓದುವ ಹವ್ಯಾಸದೊಂದಿಗೆ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಚಲಿತ ವಿದ್ಯಮಾನದ ಬಗ್ಗೆ ಸಹಪಾಠಿಗಳ ಜೊತೆ ಚರ್ಚೆ ನಡೆಸುತ್ತಿದ್ದರು.

ಹಸೈನಾರ್ ಹಾಜಿ-ಝಹುರಾ ದಂಪತಿಯ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯ ಸಹಿತ ಮೂವರು ಮಕ್ಕಳಲ್ಲಿ ಸಿನಾನ್ ಹಿರಿಯ ಮಗನಾಗಿದ್ದ.




SHARE THIS

Author:

0 التعليقات: