Tuesday, 27 April 2021

ಸರಕಾರ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ: ಸಿದ್ದರಾಮಯ್ಯ ಆರೋಪ


ಸರಕಾರ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ: ಸಿದ್ದರಾಮಯ್ಯ ಆರೋಪ

ಬೆಂಗಳೂರು, ಎ.27: ಕೋವಿಡ್ ಎರಡನೆ ಅಲೆ ಎಷ್ಟು ಭೀಕರವಾಗಿರುತ್ತದೆ ಮತ್ತು ಇದಕ್ಕೆ ತಕ್ಕಂತೆ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ತಜ್ಞರ ಸಮಿತಿ 2020 ನವೆಂಬರ್ 30ರಂದೆ ಸರಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದೇ ಇಷ್ಟೆಲ್ಲಾ ಸಾವು, ನೋವು, ಸಂಕಟ, ಕಣ್ಣೀರಿಗೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತ್ತೊಂದು ಕಡೆ ಕೇಂದ್ರ ಸರಕಾರ ಇದೇ ರೀತಿಯ ಬೇಜವಾಬ್ದಾರಿಯಿಂದ ವರ್ತಿಸಿತು. ಎರಡನೇ ಅಲೆ ಜನವರಿ ಬಳಿಕ ಬರುತ್ತದೆ ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಗೊತ್ತಿತ್ತು. ಆದರೂ ಕೇಂದ್ರ ಸರಕಾರ ಐದು ರಾಜ್ಯಗಳ ಚುನಾವಣೆ ಘೋಷಿಸಿತು. ಕುಂಬಮೇಳ ನಡೆಯುವುದಕ್ಕೂ ಅವಕಾಶ ನೀಡಿತು ಎಂದು ಟೀಕಿಸಿದರು.

ಇತರೆ ದೇಶಗಳಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಉಂಟಾದ ಸ್ಥಿತಿ ಗೊತ್ತಿದ್ದೂ ಕೇಂದ್ರ ಸರಕಾರ ಸಂಪೂರ್ಣ ಮೈಮರೆಯಿತು. 2020 ಡಿಸೆಂಬರ್ ನಲ್ಲಿ 2021ರ ಜನವರಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೇಂದ್ರ ಸರಕಾರ ಎಪ್ರಿಲ್ ಕೊನೆಯಲ್ಲಿ ತೆಗೆದುಕೊಳ್ಳುತ್ತಿದೆ. ಅದೂ ದೇಶದ ಕೋಟ್ಯಂತರ ಜನರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಲು ಶುರು ಮಾಡಿದ ಬಳಿಕ ಈಗ ತುರ್ತು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಪರಮ ನಿರ್ಲಕ್ಷ್ಯದ ಕಾರಣಕ್ಕೇ ಸಹಸ್ರಾರು ಮಂದಿ ಪ್ರಾಣ ಕಳೆದುಕೊಂಡರು. ಲಕ್ಷಾಂತರ ಮಂದಿ ಕನಿಷ್ಠ ಆರೋಗ್ಯ ಸವಲತ್ತುಗಳು, ಜೀವರಕ್ಷಕ ಔಷಧಿಗಳು ಸಿಗದೆ ಸಾವು ಬದುಕಿನ ನಡುವೆ ಸೆಣೆಸುತ್ತಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತೀ ದಿನ ದೇಶದಲ್ಲಿ 3.5 ಲಕ್ಷದಷ್ಟು ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಆದರೆ ತಜ್ಞ ವೈದ್ಯ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಅವರ ಪ್ರಕಾರ ಸೋಂಕಿತರ ಪ್ರಮಾಣ ಇನ್ನೂ ಐದು ಪಟ್ಟು ಹೆಚ್ಚಿದೆ. ಕೋವಿಡ್ ಪರೀಕ್ಷೆಗಳು ಕಡಿಮೆ ನಡೆಯುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಕಡಿಮೆ ಇದೆ. ಹೀಗಾಗಿ ಈಗಿರುವುದಕ್ಕಿಂತ ಐದು ಪಟ್ಟು ಹೆಚ್ಚು ಸೋಂಕಿತರು ಇರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ಸರಕಾರ ಪಾರದರ್ಶಕವಾಗಿ ವರ್ತಿಸುತ್ತಿಲ್ಲ. ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ. ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ. ಸರಕಾರದ ಲೆಕ್ಕಕ್ಕೂ, ಬಿಬಿಎಂಪಿ ನೀಡುವ ಲೆಕ್ಕಕ್ಕೂ, ಅಂಕಿ-ಸಂಖ್ಯೆ ಇಲಾಖೆಯ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ. ಈ ರೀತಿ ಸುಳ್ಳು ಲೆಕ್ಕ ಮತ್ತು ಪಾರದರ್ಶಕತೆ ಇಲ್ಲದೆ ಸರಕಾರ ತನ್ನ ಲೋಪಗಳಿಗೆ ತೇಪೆ ಹಾಕಿಕೊಳ್ಳಲು ಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಪ್ರತೀ ಕ್ಷಣ ತಮ್ಮದಲ್ಲದ ತಪ್ಪಿಗೆ ಜನ ಸಾಯುತ್ತಿದ್ದಾರೆ. ಅದರಲ್ಲೂ 28, 30, 40 ವರ್ಷದವರೆಲ್ಲಾ ಸಾವನ್ನಪ್ಪುತ್ತಿರುವುದು ಬಹಳ ದುಃಖದ ಸಂಗತಿ. ಇಂಥಾ ಧಾರುಣ ಸಾವುಗಳು ಸಂಭವಿಸುತ್ತಿರುವ ಹೊತ್ತಲ್ಲೂ ದೇಶದ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವವನ್ನು ಕೊರೋನ ವಿಪತ್ತಿನಿಂದ ಭಾರತ ರಕ್ಷಿಸಿಬಿಟ್ಟಿತು ಎಂದು ಹೇಳಿಕೆ ನೀಡಿದರು. ಈಗ ವೈದ್ಯ ಸವಲತ್ತುಗಳಿಲ್ಲದೆ ವಿಶ್ವದಲ್ಲೆ ಅತೀ ಹೆಚ್ಚು ನರಳುತ್ತಿರುವ ದೇಶ ಭಾರತ ಆಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಎರಡನೇ ಅಲೆ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ, “ಮಹಾಕುಂಬಕ್ಕೆ ಬರುತ್ತಿರುವವರಿಗೆ ಸ್ವಾಗತ” ಎಂದು ಟ್ವೀಟ್ ಮಾಡುತ್ತಾರೆ. ಎರಡನೇ ಅಲೆ ತಡೆಗಟ್ಟಲು ಕನಿಷ್ಠ ಸಿದ್ಧತೆಗಳನ್ನೂ ಮಾಡದ ಪ್ರಧಾನಿ ಅವರು ಹತ್ತಾರು ಚುನಾವಣಾ ರ್ಯಾಲಿಗಳನ್ನು ನಡೆಸಿದರು. ಸಾಲದ್ದಕ್ಕೆ “ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ನಾನು ನೋಡಿಯೇ ಇಲ್ಲ” ಎಂದರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಇದೆಲ್ಲಾ ದೇಶದ ಪ್ರಧಾನಿ ವರ್ತಿಸುವ ರೀತಿಯಾ? ಹಾಗೆಯೇ ಉತ್ತರಾಖಂಡದ ಮುಖ್ಯಮಂತ್ರಿ, “ಗಂಗಾಮಾತೆ ಆಶೀರ್ವಾದದಿಂದ ಕೊರೋನವೇ ಇಲ್ಲ. ಕೊರೋನ ಹೊರಟು ಹೋಗಿದೆ” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು ಎಂದು ಅವರು ತಿಳಿಸಿದರು.

ಆಕ್ಸಿಜನ್, ವೆಂಟಿಲೇಟರ್, ಹಾಸಿಗೆಗಳು, ಆಸ್ಪತ್ರೆಗಳು, ಔಷಧಗಳು, ಲಸಿಕೆ, ರೆಮ್‍ಡಿಸಿವಿರ್ ಚುಚ್ಚುಮದ್ದು ಇಲ್ಲದೆ ದೇಶದ ಜನ ಸಾಯುವ ಹೊತ್ತಲ್ಲೂ ಬಿಜೆಪಿ ಮುಖ್ಯಮಂತ್ರಿಗಳು, ಪ್ರಧಾನಿ, ಕೇಂದ್ರ ಸಚಿವರು ಅನಾಗರಿಕ, ಅಮಾನವೀಯ ಹೇಳಿಕೆಗಳಿಗೆ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೋವಿಡ್-19 ಮೊದಲ ಅಲೆ 2020ರ ಅಕ್ಟೋಬರ್, ನವೆಂಬರ್ ವೇಳೆಗೆ ಮುಗಿದಿತ್ತು. ಎರಡನೇ ಅಲೆ 2021ರ ಆರಂಭದಲ್ಲೇ ಅಪ್ಪಳಿಸುತ್ತದೆ ಎನ್ನುವುದೂ ಗೊತ್ತಿತ್ತು. ಆದರೆ ಇಲ್ಲಿಯವರೆಗೂ ದೇಶದ ಜನಕ್ಕೆ ಅಗತ್ಯವಾದಷ್ಟು ಲಸಿಕೆ ಲಭ್ಯವಿಲ್ಲ. 2020ರ ಅಕ್ಟೋಬರ್ ನಲ್ಲೇ ಲಸಿಕೆ ಸಿದ್ದಪಡಿಸಲು ಗುತ್ತಿಗೆ ಕರೆಯಲಾಗಿತ್ತು. ಆದರೆ ಆರು ತಿಂಗಳು ಮುಗಿದರೂ ಇಲ್ಲಿಯವರೆಗೂ ದೇಶದ ಜನಕ್ಕೆ ಲಸಿಕೆ ಸಿಗುತ್ತಿಲ್ಲ ಎಂದು ಅವರು ದೂರಿದರು.

ಮೊದಲು 65 ವರ್ಷ ಮೇಲ್ಪಟ್ಟವರಿಗೆ ಎಂದರು, ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಎಂದರು. ಈಗ 28-30 ವರ್ಷದವರೆಲ್ಲಾ ಕೊರೋನಕ್ಕೆ ಬಲಿ ಆಗುವುದು ಹೆಚ್ಚಾಗುತ್ತಿದ್ದಂತೆ 18 ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ ಎನ್ನುತ್ತಿದ್ದಾರೆ. ಲಸಿಕೆಯಲ್ಲೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಾರತಮ್ಯ ನೀತಿ ಅನುಸರಿಸಿದ್ದು ಮಾತ್ರ ಅಕ್ಷಮ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಚುನಾವಣೆ ಇರುವ ರಾಜ್ಯಗಳಲ್ಲಿ, “ಪಕ್ಷ ಅಧಿಕಾರಕ್ಕೆ ಬಂದರೆ ಕೊರೋನ ಲಸಿಕೆ ಉಚಿತ” ಎಂದು ಭಾಷಣ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಮುಖಂಡರು ಈಗಾಗಲೇ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯಗಳ ಜನರಿಗೆ ಏಕೆ ಉಚಿತ ಲಸಿಕೆ ಕೊಡುತ್ತಿಲ್ಲ? ರಾಜ್ಯದ ಜನ ಏನು ತಪ್ಪು ಮಾಡಿದ್ದಾರೆ? ನಿಮಗೆ ಗೆಲ್ಲಿಸಿದ್ದೇ ತಪ್ಪಾಯಿತಾ? ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಸ್ಥಿತಿ ನಿಭಾಯಿಸಲಾಗದೆ ಕೈಚೆಲ್ಲಿರುವ ಹೊತ್ತಲ್ಲಿ ಕಾಂಗ್ರೆಸ್ ಪಕ್ಷ ಜನರನ್ನು ಕೋವಿಡ್‍ನಿಂದ ರಕ್ಷಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಇಂದು ಮತ್ತೊಂದು ಸುತ್ತಿನ ಸಭೆಯನ್ನು ಕಾಂಗ್ರೆಸ್ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಜತೆ ನಡೆಸಲಾಯಿತು ಎಂದು ಅವರು ಹೇಳಿದರು.

ಈಗಾಗಲೇ ಕಾಂಗ್ರೆಸ್‍ನ ಹಾಲಿ-ಮಾಜಿ ಶಾಸಕರು, ಸಂಸದರು ಮತ್ತು ಇತರೆ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಲವು ರೀತಿಯ ಆರೋಗ್ಯ ನೆರವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯ ಕಾಂಗ್ರೆಸ್‍ನಿಂದ ದೊಡ್ಡದೊಂದು ವೈದ್ಯರ ಪಟ್ಟಿ ಸಿದ್ದಪಡಿಸಲಾಗಿದೆ. ಸೋಂಕಿತರಿಗೆ ಅಗತ್ಯ ನೆರವು ನೀಡುವುದು, ಸಲಹೆ ನೀಡುವುದು, ಚಿಕಿತ್ಸೆಗೆ ಮಾರ್ಗದರ್ಶನ ನೀಡುವುದೂ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದು, ರಕ್ತ ಪರೀಕ್ಷೆ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ಹಲವು ರೀತಿಯ ಕಾರ್ಯಗಳನ್ನು ಇನ್ನಷ್ಟು ವೇಗವಾಗಿ, ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೆಲ್ಲರ ಜತೆಗೆ ರಾಜ್ಯದ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ಬದಲಿಗೆ ಲಾಕ್ ಡೌನ್ ಘೋಷಿಸಿ ದುಡಿಯುವ ವರ್ಗ ಮತ್ತು ಸಮುದಾಯಗಳನ್ನು ಹಸಿವಿಗೆ ದೂಡಿವೆ. ಇಲ್ಲಿಯವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶ್ರಮಿಕರಿಗೆ, ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಿಲ್ಲ. ಮೊದಲ ಅಲೆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಘೋಷಿಸಿದ್ದ ಪ್ಯಾಕೇಜ್ ಸಮರ್ಪಕವಾಗಿ ಅಗತ್ಯವಿದ್ದವರಿಗೂ ತಲುಪಿಲ್ಲ. ಆದುದರಿಂದ, ಅವತ್ತೇ ದುಡಿದು ಅವತ್ತೇ ತಿನ್ನಬೇಕಾದ ಬಡ ಕುಟುಂಬಗಳಿಗೆ 10 ಕೆಜಿ ಅಕ್ಕಿ ಜತೆಗೆ ಅವರ ಕೈಗೆ 10 ಸಾವಿರ ರೂಪಾಯಿ ಹಣ ಕೊಡಬೇಕು.


-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕSHARE THIS

Author:

0 التعليقات: