Saturday, 17 April 2021

ಮೊದಲ ಬಾರಿ ಇಂತಹ ರ‍್ಯಾಲಿಗೆ ಸಾಕ್ಷಿಯಾಗಿದ್ದೇನೆ: ಬಂಗಾಳದಲ್ಲಿ ಭಾರೀ ಜನಸಂದಣಿ ನೋಡಿ ಪ್ರಧಾನಿ ಪ್ರಶಂಸೆ


 ಮೊದಲ ಬಾರಿ ಇಂತಹ ರ‍್ಯಾಲಿಗೆ ಸಾಕ್ಷಿಯಾಗಿದ್ದೇನೆ: ಬಂಗಾಳದಲ್ಲಿ ಭಾರೀ ಜನಸಂದಣಿ ನೋಡಿ ಪ್ರಧಾನಿ ಪ್ರಶಂಸೆ

ಕೋಲ್ಕತಾ: ಒಂದಡೆ ದೇಶದಲ್ಲಿ ದಿನಕ್ಕೆ 2 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿ ಹೊಸ ದಾಖಲೆ ನಿರ್ಮಿಸುವ ಮೂಲಕ ಜನ ಸಾಮಾನ್ಯರ ಜೀವ  ಹಿಂಡುತ್ತಿದ್ದರೆ,  ಮತ್ತೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ರ‍್ಯಾಲಿಗೆ ಸೇರಿರುವ ಭಾರೀ ಜನಸಂದಣಿಯನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಒಂದೇ ದಿನ 2.34 ಲಕ್ಷ ಹೊಸ ಸೋಂಕು ವರದಿಯಾದ ದಿನವೇ ಅಸನ್ಸೋಲ್‌ನಲ್ಲಿ ನಡೆದ ತಮ್ಮ ರ್ಯಾಲಿಯಲ್ಲಿ ಹೆಚ್ಚಿನ ಜನಸಮೂಹ ಸೇರಿದ್ದನ್ನು ಕಂಡು ಶ್ಲಾಘನೆ ವ್ಯಕ್ತಪಡಿಸಿರುವ ಪ್ರಧಾನಿಯ ನಡೆ ಹುಬ್ಬೇರಿಸುವಂತೆ ಮಾಡಿದೆ.

"ಲೋಕಸಭಾ ಚುನಾವಣೆಯ ಸಮಯದಲ್ಲಿ ನಾನು ಎರಡು ಬಾರಿ ಇಲ್ಲಿಗೆ ಬಂದಿದ್ದೇನೆ. ಕೊನೆಯ ಬಾರಿ ನಾನು ಬಾಬುಲ್ ಜೀಗೆ (ಅಸನ್ಸೋಲ್ ಸಂಸದ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ) ಮತ ಯಾಚಿಸಲು ಬಂದಿದ್ದೇನೆ. ಆಗ ನಾನು ಮೊದಲ ಬಾರಿ ಇಲ್ಲಿಗೆ ಬಂದಿದ್ದಾಗ  ಜನಸಮೂಹದ ಗಾತ್ರ ಇಂದಿಗಿಂತ ಕಾಲು ಭಾಗ ಮಾತ್ರ ಇತ್ತು. ಆದರೆ ಇಂದು, ಎಲ್ಲಾ ದಿಕ್ಕುಗಳಲ್ಲಿಯೂ ನಾನು ಅಪಾರ ಜನಸಂದಣಿಯನ್ನು ನೋಡುತ್ತಿದ್ದೇನೆ ... ಮೊದಲ ಬಾರಿಗೆ ಇಂತಹ ರ್ಯಾಲಿಗೆ ಸಾಕ್ಷಿಯಾಗಿದ್ದೇನೆ ... ಇಂದು, ನೀವು ನಿಮ್ಮ ಶಕ್ತಿಯನ್ನು ತೋರಿಸಿದ್ದೀರಿ. ಮುಂದಿನ ಹಂತವು ಹೆಚ್ಚು ಮುಖ್ಯವಾಗಿದೆ. ನೀವೆಲ್ಲರೂ ಮತ ಚಲಾಯಿಸಿ ಇತರರನ್ನು ಸಹ ಮತ ಚಲಾಯಿಸಲು ಪ್ರೇರೇಪಿಸಿ "ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಎಪ್ರಿಲ್ 26 ರಂದು ಅಸನ್ಸೋಲ್ ನಲ್ಲಿ  ಮತದಾನ ನಡೆಯಲಿದೆ. ಬಂಗಾಳ ವಿಧಾನಸಭಾ ಚುನಾವಣೆಯ ಎಂಟು ಹಂತಗಳಲ್ಲಿ ಏಳನೇ ಹಂತ ಈ ಜಿಲ್ಲೆಯಲ್ಲಿ ನಡೆಯಲಿದೆ.

ದೇಶವು ಕೊರೋನ ಸೋಂಕಿನ ಎರಡನೇ ಅಲೆಯನ್ನು  ಎದುರಿಸುತ್ತಿರುವ ವೇಳೆ ಚುನಾವಣಾ ರ‍್ಯಾಲಿಗಳಲ್ಲಿ ಪ್ರಧಾನಮಂತ್ರಿ ನಿರಂತರವಾಗಿ, ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.

ರಾಜ್ಯ ಚುನಾವಣೆಗೆ ಪ್ರಚಾರ ಮಾಡುತ್ತಿರುವ ಪ್ರಧಾನಿ ಹಾಗೂ  ಇತರ ರಾಜಕೀಯ ಮುಖಂಡರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದಾರೆ: "ಇಂತಹ ದೊಡ್ಡ ಸಂಖ್ಯೆಯ ಅನಾರೋಗ್ಯ ಪೀಡಿತರು ಹಾಗೂ  ದಾಖಲೆಯ ಸಾವುಗಳು ಕಂಡುಬರುವುದು ಇದೇ ಮೊದಲು''  ಎಂದು ಟ್ವೀಟಿಸಿದ್ದಾರೆ.


SHARE THIS

Author:

0 التعليقات: