Thursday, 1 April 2021

ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಗುಡ್ ಫ್ರೈಡೇ ಆಚರಣೆ


ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಗುಡ್ ಫ್ರೈಡೇ ಆಚರಣೆ

ಮಂಗಳೂರು: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ನೆನಪಿನಲ್ಲಿ ಕ್ರೈಸ್ತರು ಇಂದು ಗುಡ್ ಫ್ರೈಡೇಯನ್ನು ನಗರದ ಎಲ್ಲಾ ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಆಚರಿಸುತ್ತಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಮನೆಗಳಲ್ಲಿಯೇ ಶುಭ ಶುಕ್ರವಾರವನ್ನು ಕ್ರೈಸ್ತ ಬಾಂಧವರು ಆಚರಿಸಿದ್ದರು. ಈ ಬಾರಿಯೂ ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತಿದೆ.

ನಗರದ ಮಿಲಾಗ್ರಿಸ್ ಚರ್ಚ್ ನಲ್ಲಿ ಇಂದು ಬೆಳಗ್ಗೆ ‘ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ಆಚರಣೆ ನಡೆಯಿತು. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದ್ದಲ್ಲಿಂದ ಆರಂಭಿಸಿ ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ ’ (ವೇ ಆ್ ದಿ ಕ್ರಾಸ್)ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳನ್ನು ಸ್ಮರಿಸಲಾಗುತ್ತದೆ. ಜತೆಗೆ ಈ ದಿನವನ್ನು ಧ್ಯಾನ ಮತ್ತು ಉಪವಾಸದ ಮೂಲಕ ಕ್ರೈಸ್ತ ಬಾಂಧವರು ಕಳೆಯುತ್ತಾರೆ.

ಶಿಲುಬೆಯ ಹಾದಿ ಮನನ ಮಾಡುವ ಸಂದರ್ಭದಲ್ಲಿ ವಿವಿಧ ಕಷ್ಟ ಸಂಕಷ್ಟಗಳಲ್ಲಿರುವ ಜನರಿಗಾಗಿ ಮತ್ತು ಒಟ್ಟು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಮಧ್ಯಾಹ್ನ ಹಾಗೂ ಸಂಜೆಯ ವೇಳೆಯಲ್ಲೂ ನಗರದ ರೊಸಾರಿಯೋ ಕೆಥಡ್ರಲ್ ಸೇರಿದಂತೆ ಚರ್ಚ್‌ಗಳಲ್ಲಿ ‘ಶಿಲುಬೆಯ ಹಾದಿ’ ನಡೆಯಲಿದೆ. ಬಳಿಕ ಅದನ್ನು ಮೆರವಣಿಗೆ ನೆರವೇರಿಸಲಾಗುತ್ತದೆ.

ಈ ದಿನ ಚರ್ಚ್‌ಗಳಲ್ಲಿ ಗಂಟೆಗಳ ನಿನಾದ ಇರುವುದಿಲ್ಲ. ಬಲಿಪೂಜೆಯನ್ನೂ ಮಾಡಲಾಗುವುದಿಲ್ಲ. ನಗರದ ಚರ್ಚ್‌ಗಳಲ್ಲಿ    ಧರ್ಮಗುರುಗಳ ಮಾರ್ಗದರ್ಶನದಲ್ಲಿ ಮೌನ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.



SHARE THIS

Author:

0 التعليقات: