Sunday, 11 April 2021

ಬಿಎಸ್‌ವೈ, ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸಿ: ರಣದೀಪಸಿಂಗ್ ಸರ್ಜೆವಾಲಾ ಆಗ್ರಹ


 ಬಿಎಸ್‌ವೈ, ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸಿ: ರಣದೀಪಸಿಂಗ್ ಸರ್ಜೆವಾಲಾ ಆಗ್ರಹ

ಬಸವಕಲ್ಯಾಣ (ಬೀದರ್) : `ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಹೀಗಿದ್ದಾಗ ಇವರಿಬ್ಬರಲ್ಲಿ ಯಾರ ತಪ್ಪಿದೆ ಅವರ ವಿರುದ್ಧ ಕ್ರಮ ಜರುಗಿಸಿ' ಎಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ರಣದೀಪಸಿಂಗ್ ಸರ್ಜೆವಾಲಾ ಆಗ್ರಹಿಸಿದರು.

ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಫರ್ಧಿಸಿದ ಮಾಲಾ ಬಿ.ನಾರಾಯಣರಾವ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

'ಈಶ್ವರಪ್ಪನವರ ಪ್ರಕರಣ ಒಂದೇ ಅಲ್ಲ. ಸರ್ಕಾರ ಸರಿಯಾದ ಸ್ಥಿತಿಯಲ್ಲಿ ಇಲ್ಲ ಎನ್ನುವುದಕ್ಕೆ ಅನೇಕ ಸಚಿವರ ಮಧ್ಯದಲ್ಲಿನ ಹಗ್ಗಜಗ್ಗಾಟವೇ ನಿದರ್ಶನವಾಗಿದೆ. ವಿವಿಧ ಸಮುದಾಯಗಳಿಗೆ ಮೀಸಲಾತಿ ಕೊಡುತ್ತೇವೆ ಹಾಗೂ ವಿವಿಧ ಸೌಲಭ್ಯ ನೀಡುತ್ತೇವೆ ಎಂದು ಯಡಿಯೂರಪ್ಪ ಪ್ರತಿ ಸಮಾರಂಭಗಳಲ್ಲಿ ಭರವಸೆ ನೀಡಿ ಈಗ ನುಸುಳಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರತಿಭಟನೆಗಳು ಆರಂಭವಾಗಿವೆ. ದೇಶದಲ್ಲಿ ಕೋವಿಡ್ ಹೆಚ್ಚಳವಿರುವ ರಾಜ್ಯ ಕರ್ನಾಟಕ ಆಗಿದ್ದರೂ ಅದನ್ನು ಹತೋಟಿಗೆ ತರುವ ಪ್ರಯತ್ನ ನಡೆದಿಲ್ಲ' ಎಂದು ವಾಗ್ದಾಳಿ ನಡೆಸಿದರು.

'ಕೇಂದ್ರ ಸರ್ಕಾರ ರೈತ ವಿರೋಧಿ ಆಗಿದ್ದು ದೆಹಲಿಯಲ್ಲಿ ಕೆಲ ತಿಂಗಳಿಂದ ಪ್ರತಿಭಟನೆ ನಡೆದರೂ ಪರಿಹಾರ ಸಿಕ್ಕಿಲ್ಲ' ಎಂದು ಹೇಳಿದರು.

'ಜೆಡಿಎಸ್‌ಗೆ ಮಸ್ಕಿ ಹಾಗೂ ಬೆಳಗಾವಿಯಲ್ಲಿ ಅಭ್ಯರ್ಥಿ ನಿಲ್ಲಿಸುವುದಕ್ಕೆ ಹಣದ ಕೊರತೆಯಿದೆ. ಹಾಗಾದರೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಣ ಎಲ್ಲಿಂದ ಬಂತು. ಯಡಿಯೂರಪ್ಪನವರು ಹಣ ಕಳಿಸಿದರೇ ಎಂಬುದನ್ನು ಆ ಪಕ್ಷದವರು ಸ್ಪಷ್ಟಪಡಿಸಬೇಕು' ಎಂದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 'ಈ ಭಾಗದ ಆರು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ 371(ಜೆ) ಜಾರಿಗೊಳಿಸಿದೆವು. ಇದಕ್ಕೆ ಬಿಜೆಪಿಯವರೇ ಆಗಿದ್ದ ಅಡ್ವಾಣಿಯವರು ವಿರೋಧ ವ್ಯಕ್ತಪಡಿಸಿದರು. ಈ ಕಾನೂನಿನ ಕಾರಣ ಈ ಭಾಗದ ಅನೇಕರು ವೈದ್ಯ, ಎಂಜಿನಿಯರ್ ಆಗುತ್ತಿದ್ದಾರೆ. ಆದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ' ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, 'ಇಲ್ಲಿನ ನೂತನ ಅನುಭವ ಮಂಟಪಕ್ಕೆ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ವಿವಿಧ ನಿಗಮ ಮಂಡಳಿಗಳನ್ನು ಕೂಡ ಘೋಷಿಸಲಾಯಿತು. ಆದರೂ ಅನುದಾನ ನೀಡಿಲ್ಲ. ಇಲ್ಲಿನ ಶಾಸಕರಾಗಿದ್ದ ದಿ.ಬಿ.ನಾರಾಯಣರಾವ್ ಅವರು ಎರಡೇ ವರ್ಷದಲ್ಲಿ ಉತ್ತಮ ಕಾರ್ಯ ಕೈಗೊಂಡು ಜನಪ್ರಿಯರಾದರು. ಅವರ ಪತ್ನಿ ಮಾಲಾಗೆ ಮತ ಹಾಕಿ ಗೆಲ್ಲಿಸಿ ನ್ಯಾಯ ಕೊಡಿ' ಎಂದು ಮತದಾರರಲ್ಲಿ ಕೇಳಿಕೊಂಡರು.

ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಕೆ.ಎಚ್.ಮುನಿಯಪ್ಪ, ಯು.ಟಿ.ಖಾದರ್, ರಾಜಶೇಖರ್ ಪಾಟೀಲ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಅಭ್ಯರ್ಥಿ ಮಾಲಾ ನಾರಾಯಣರಾವ್ ಮಾತನಾಡಿದರು.

ಶಾಸಕರಾದ ಪ್ರಿಯಾಂಕ್ ಖರ್ಗೆ, ಅಜಯಸಿಂಗ್, ರಹೀಂ ಖಾನ್, ಡಾ.ಶರಣಬಸಪ್ಪ ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

ಬಿಜೆಪಿ ಸರ್ಕಾರ ಬೀಳುವುದು ನಿಶ್ಚಿತ: ಖರ್ಗೆ

'ಕಾಂಗ್ರೆಸ್ ಗೆಲ್ಲಿಸಿ ಏನುಪಯೋಗ ಎನ್ನುವುದು ವಿರೋಧಿಗಳ ಗೋಳು. ಆದರೆ, ಬಸವಕಲ್ಯಾಣ, ಮಸ್ಕಿ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆದ್ದರೆ ಮರುದಿನವೇ ಯಡಿಯೂರಪ್ಪ ಸರ್ಕಾರ ಬಿದ್ದು ಹೋಗುವುದು ನಿಶ್ಚಿತ' ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದರು.


SHARE THIS

Author:

0 التعليقات: