Monday, 5 April 2021

ಕೋವಿಡ್ ಹೆಚ್ಚಳ: ಮಹಾರಾಷ್ಟ್ರ, ಛತ್ತೀಸ್‌ಗಡ, ಪಂಜಾಬ್‌ಗೆ ಕೇಂದ್ರ ವೈದ್ಯರ ತಂಡ


ಕೋವಿಡ್ ಹೆಚ್ಚಳ:  ಮಹಾರಾಷ್ಟ್ರ, ಛತ್ತೀಸ್‌ಗಡ,  ಪಂಜಾಬ್‌ಗೆ ಕೇಂದ್ರ ವೈದ್ಯರ ತಂಡ

ನವದೆಹಲಿ: ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಪಂಜಾಬ್‌ನ 50 ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಆರೋಗ್ಯ ತಜ್ಞರ ತಂಡಗಳನ್ನು ಕಳುಹಿಸಿಕೊಟ್ಟಿದೆ.

ಮಹಾರಾಷ್ಟ್ರದ 30 ಜಿಲ್ಲೆಗಳಿಗೆ, ಛತ್ತೀಸ್‌ಗಡದ 11 ಜಿಲ್ಲೆಗಳಿಗೆ ಮತ್ತು ಪಂಜಾಬ್‌ನ 9 ಜಿಲ್ಲೆಗಳಿಗೆ ತಂಡಗಳನ್ನು ಕಳುಹಿಸಿಕೊಡಲಾಗಿದೆ. ಈ ತಂಡಗಳು ರಾಜ್ಯದ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿವೆ. ಪರಿಸ್ಥಿತಿಯ ಮೇಲೆ ನಿಗಾ ಇರಿಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಇಬ್ಬರು ಸದಸ್ಯರ ಉನ್ನತಮಟ್ಟದ ತಂಡದಲ್ಲಿ ವೈದ್ಯರು ಅಥವಾ ಸಾಂಕ್ರಾಮಿಕ ರೋಗ ತಜ್ಞರು ಹಾಗೂ ಆರೋಗ್ಯ ತಜ್ಞರು ಇರಲಿದ್ದಾರೆ.

ತಂಡಗಳು ತಕ್ಷಣವೇ ಸ್ಥಳಕ್ಕೆ ತೆರಳಲಿವೆ. ಕೋವಿಡ್ ನಿರ್ವಹಣೆ, ಪರೀಕ್ಷೆ, ಕಂಟೈನ್‌ಮೆಂಟ್ ಪ್ರದೇಶಗಳ ನಿರ್ವಹಣೆ, ಆಸ್ಪತ್ರೆಗಳ ಮತ್ತು ಹಾಸಿಗೆಗಳ ಲಭ್ಯತೆ, ಆರೋಗ್ಯ ಮೂಲ ಸೌಕರ್ಯಗಳ ಲಭ್ಯತೆ, ವೆಂಟಿಲೇಟರ್‌ಗಳು ಆಕ್ಸಿಜನ್ ಲಭ್ಯತೆ, ಲಸಿಕೆ ನೀಡಿಕೆಯಲ್ಲಿನ ಪ್ರಗತಿ ಇತ್ಯಾದಿ ವಿಚಾರಗಳ ಮೇಲೆ ತಂಡಗಳು ನಿಗಾ ಇರಿಸಲಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಹೆಚ್ಚುವರಿ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ಸಿಂಗ್ ಮತ್ತು ರಿಚಾ ಶರ್ಮಾ ಅವರನ್ನು ಪಂಜಾಬ್ ಮತ್ತು ಛತ್ತೀಸ್‌ಗಡಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಂಟಿ ಕಾರ್ಯದರ್ಶಿ ಕುನಕ್ ಕುಮಾರ್ ಅವರನ್ನು ಮಹಾರಾಷ್ಟ್ರಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.



SHARE THIS

Author:

0 التعليقات: