Saturday, 10 April 2021

ಮಂಗಳೂರು; ಇಂದಿನಿಂದ ಕೊರೋನ ನೈಟ್ ಕರ್ಫ್ಯೂ, 45 ಚೆಕ್‌ಪೋಸ್ಟ್‌ಗಳ ಮೂಲಕ ಬಂದೋಬಸ್ತ್: ಎನ್. ಶಶಿಕುಮಾರ್‌

 

ಮಂಗಳೂರು; ಇಂದಿನಿಂದ ಕೊರೋನ ನೈಟ್ ಕರ್ಫ್ಯೂ, 45 ಚೆಕ್‌ಪೋಸ್ಟ್‌ಗಳ ಮೂಲಕ ಬಂದೋಬಸ್ತ್: ಎನ್. ಶಶಿಕುಮಾರ್‌

ಮಂಗಳೂರು, ಎ.10: ರಾಜ್ಯ ಸರಕಾರದ ಸೂಚನೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಂಗಳೂರಿನಲ್ಲಿ ಕೊರೋನ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 45 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಿ ಬಂದೋಬಸ್ತ್ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಮಾಹಿತಿ ನೀಡಿದ ಅವರು, ಮನಪಾ ಹೊರ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿಯೂ ಸುಗಮ ಸಂಚಾರವನ್ನು ಖಾತರಿಪಡಿಸಲು ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗುತ್ತಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಪಿಎಸ್‌ಐಗಿಂತ ಹೆಚ್ಚಿನ ದರ್ಜೆಯ ಅಧಿಕಾರಿಯನ್ನು ಒಳಗೊಂಡು ಅಗತ್ಯಕ್ಕೆ ತಕ್ಕುದಾಗಿ 8ರಿಂದ 10 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇಲಾಖೆಯ ಶೇ.70ರಷ್ಟು ಸಿಬ್ಬಂದಿಯನ್ನು ಕೊರೋನ ನೈಟ್ ಕರ್ಫ್ಯೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದರು.

ಕರ್ಫ್ಯೂ ಅವಧಿಯಲ್ಲಿ ಮನಪಾ ವ್ಯಾಪ್ತಿಯೊಳಗೆ ಅನಗತ್ಯ ವಾಹನಗಳ ಸಂಚಾರ, ಜನರ ಓಡಾಟ ಕಂಡುಬಂದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ವಾಹನ ಜಪ್ತಿ ಮಾಡುವ ಕಾರ್ಯವನ್ನು ಮಾಡಲಾಗುವುದು. ಹಾಗಾಗಿ ರಾತ್ರಿ ಪಾಳಿ ಕೆಲಸ ಮಾಡುವವರು ಸೇರಿದಂತೆ 10 ಗಂಟೆಯೊಳಗೆ ತಮ್ಮ ನಿಗದಿತ ತಾಣವನ್ನು ಸೇರಿರಬೇಕು. ಹಾಲು, ಪೇಪರ್ ತರುವ ನೆಪದಲ್ಲಿಯೂ ಸಾರ್ವಜನಿಕರು ಯಾರೂ ಈ ಕರ್ಫ್ಯೂ ಅವಧಿಯಲ್ಲಿ ಓಡಾಡುವಂತಿಲ್ಲ ಎಂದು ಆಯುಕ್ತರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.


ಅಗತ್ಯ ವೈದ್ಯಕೀಯ ಹಾಗೂ ಹಾಲು, ಪತ್ರಿಕೆ, ಎಪಿಎಂಸಿಗೆ ತರಕಾರಿ ಹಣ್ಣು ಹಂಪಲುಗಳ ವಾಹನ ಸಾಗಾಟ ಅಬಾಧಿತವಾಗಿರುತ್ತದೆ. ಕರ್ಫ್ಯೂ ಅವಧಿಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ಸು ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕರೆತರಲು ಅಥವಾ ತಲುಪಿಸಲು ಸಾರ್ವಜನಿಕ ವಾಹನಗಳನ್ನೇ ಬಳಸಬೇಕು. ಒಂದು ವೇಳೆ ತೀರಾ ಅಗತ್ಯವಾದಲ್ಲಿ ತಲುಪಿಸುವವರು ಪ್ರಯಾಣಿಕರ ಟಿಕೆಟ್‌ಗಳನ್ನು ತೋರಿಸಿದ್ದಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಅವಕಾಶ ಕಲ್ಪಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆದರೆ ಆ ನೆಪದಲ್ಲಿ ವಿನಾಕಾರಣ ಕರ್ಫ್ಯೂ ಅವಧಿಯಲ್ಲಿ ಸಂಚಾರಕ್ಕೆ ಅವಕಾಶವಿಲ್ಲ.

-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.


SHARE THIS

Author:

0 التعليقات: