Thursday, 15 April 2021

ಹರಿದ್ವಾರದ ಕುಂಭಮೇಳದಲ್ಲಿ ಭಾಗಿಯಾಗಿದ್ದ 30 ಸಾಧುಗಳಿಗೆ ಕೊರೋನ ಪಾಸಿಟಿವ್


 ಹರಿದ್ವಾರದ ಕುಂಭಮೇಳದಲ್ಲಿ ಭಾಗಿಯಾಗಿದ್ದ 30 ಸಾಧುಗಳಿಗೆ ಕೊರೋನ ಪಾಸಿಟಿವ್

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಬೃಹತ್ ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಅಖಾಡ ಪರಿಷದ್ ನಾಯಕ ಮಹಾಂತ ನರೇಂದ್ರ ಗಿರಿ ಸಹಿತ 30 ಸಾಧುಗಳಿಗೆ ಕೊರೋನ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಮಹಾಂತ ನರೇಂದ್ರ ಗಿರಿ ಅವರು ರಿಷಿಕೇಶ್ ನಲ್ಲಿರುವ ಏಮ್ಸ್‍ಗೆ(ಅಖಿಲಭಾರತ ವೈದ್ಯಕೀಯ ಸಂಸ್ಥೆ)ದಾಖಲಾಗಿದ್ದಾರೆ. 

ಮಧ್ಯಪ್ರದೇಶದ ಇನ್ನೊರ್ವ ಪ್ರಮುಖ ಸಾಧು, ಮಹಾ ನಿರ್ವಾಣಿ ಅಖಾಡದ ನಾಯಕರಾಗಿದ್ದ ಸ್ವಾಮಿ ಕಪಿಲ್ ದೇವ್ ಡೆಹ್ರಾಡೂನ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ  ನಿಧನರಾಗಿದ್ದಾರೆ.

ಇಲ್ಲಿಯವರೆಗೆ 30 ಸಾಧುಗಳಲ್ಲಿ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.  ಕೋವಿಡ್ ಪ್ರಕರಣಗಳು ಯಾವುದೇ ನಿರ್ದಿಷ್ಟ ಅಖಾಡದಲ್ಲಿಲ್ಲ. ನಿರಂಜಿನಿ, ಜುನಾ ಹಾಗು ಇತರರು ಸೇರಿದಂತೆ ಬಹುತೇಕ ಎಲ್ಲಾ ಅಖಾಡದಲ್ಲೂ ಕೇಸ್ ಗಳಿವೆ ಎಂದು ಹರಿದ್ವಾರ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಕೆ. ಜಾ ಹೇಳಿದ್ದಾರೆ.

ಕೋವಿಡ್-19 ಹದಗೆಡುತ್ತಿರುವ ಪರಿಸ್ಥಿತಿಯ ದೃಷ್ಟಿಯಿಂದ ಕುಂಭಮೇಳವು ನಮ್ಮ  ಪಾಲಿಗೆ ಮುಗಿದಿದೆ. ಪ್ರಮುಖ ಶಾಹಿ ಸ್ನಾನ ಮುಗಿದಿದೆ. ನಮ್ಮ ಅಖಾಡದ ಹೆಚ್ಚಿನವರಿಗೆ ಕೊರೋನ ವೈರಸ್ ಲಕ್ಷಣ ಕಾಣಿಸಿಕೊಂಡಿದೆ ಎಂದು ನಿರಂಜನ್ ಅಖಾಡದ ಕಾರ್ಯದರ್ಶಿ ರವೀಂದ್ರ ಪುರಿ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ಎಪ್ರಿಲ್ 10ರಿಂದ 15ರ ತನಕ ಮೊದಲ 5 ದಿನಗಳಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದ್ದ 2,167 ಜನರಿಗೆ ಕೊರೋನ ಪಾಸಿಟಿವ್ ಆಗಿದೆ ಎಂದು ಎಎನ್ ಐ ಗುರುವಾರ ವರದಿ ಮಾಡಿತ್ತು.

SHARE THIS

Author:

0 التعليقات: