Monday, 26 April 2021

ನಿಮ್ಮ ಸಂಸ್ಥೆಯೇ ಕೋವಿಡ್ 2ನೇ ಅಲೆಗೆ ಸಂಪೂರ್ಣ ಹೊಣೆ: ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್


 ನಿಮ್ಮ ಸಂಸ್ಥೆಯೇ ಕೋವಿಡ್ 2ನೇ ಅಲೆಗೆ ಸಂಪೂರ್ಣ ಹೊಣೆ: ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಚೆನ್ನೈ: ಕೋವಿಡ್ ಸಾಂಕ್ರಾಮಿಕದ ನಡುವೆ ರಾಜಕೀಯ ರ್ಯಾಲಿಗಳಿಗೆ ಅನುಮತಿ ನೀಡಿದ ಚುನಾವಣಾ ಆಯೋಗವನ್ನು ಮದ್ರಾಸ್ ಹೈಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. "ನಿಮ್ಮ ಸಂಸ್ಥೆಯೇ ಕೋವಿಡ್-19 ಎರಡನೇ ಅಲೆಗೆ ಸಂಪೂರ್ಣವಾಗಿ ಹೊಣೆ,'' ಎಂದು ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಚುನಾವಣಾ ಆಯೋಗದ ವಕೀಲರಿಗೆ ಹೇಳಿದರು. "ಪ್ರಾಯಶಃ ನಿಮ್ಮ ಅಧಿಕಾರಿಗಳ ವಿರುದ್ಧ ಕೊಲೆ ಆರೋಪಗಳ ಮೇಲೆ ಪ್ರಕರಣ ದಾಖಲಿಸಬೇಕು,'' ಎಂದು ಮುಖ್ಯ ನ್ಯಾಯಮೂರ್ತಿ ಮೌಖಿಕವಾಗಿ ಹೇಳಿದರು.

"ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಚುನಾವಣಾ ಪ್ರಚಾರದ ವೇಳೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಜಾರಿಗೊಳಿಸಲು ಆಯೋಗ ವಿಫಲವಾಗಿದೆ,'' ಎಂದು ಅವರು ಹೇಳಿದರು.

"ಚುನಾವಣಾ ರ್ಯಾಲಿಗಳು ನಡೆದಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರೇ?'' ಎಂದೂ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾ ಆಯೋಗದ ವಕೀಲರನ್ನು ಪ್ರಶ್ನಿಸಿದರು.

ಮತ ಎಣಿಕೆ ದಿನದಂದು ಕೋವಿಡ್ ನಿಯಮಗಳ ಪಾಲನೆ ಕುರಿತಾದ ಮಾರ್ಗಸೂಚಿಯನ್ನು ಮುಂದಿಡದೇ ಇದ್ದರೆ ಮೇ 2ರಂದು ನಡೆಯಲಿರುವ ಮತ ಎಣಿಕೆಗೆ ತಡೆ ಹೇರುವ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ.

"ಸಾರ್ವಜನಿಕ ಆರೋಗ್ಯ ಎಲ್ಲಕ್ಕಿಂತಲೂ ಮಿಗಿಲು, ಆದರೆ  ನಮ್ಮ ಸಂವಿಧಾನಾತ್ಮಕ ಪ್ರಾಧಿಕಾರಗಳಿಗೆ ಇವುಗಳ ಕುರಿತು ನೆನಪಿಸಬೇಕಾಗಿರುವುದು ಕಳವಳಕಾರಿ. ನಾಗರಿಕ ಬದುಕಿದ್ದಲ್ಲಿ ಮಾತ್ರ ಅವರಿಗೆ ತಮ್ಮ ಹಕ್ಕುಗಳನ್ನು ಅನುಭವಿಸಲು ಸಾಧ್ಯ,'' ಎಂದು ಅವರು ಹೇಳಿದರು.

"ಈಗ ಉಳಿವಿನ ಪ್ರಶ್ನೆ ಎದುರಾಗಿದೆ, ಉಳಿದೆಲ್ಲವೂ ನಂತರ,'' ಎಂದು ಅವರು ಹೇಳಿದರು.

ಮತ ಎಣಿಕೆ ದಿನದ ಮಾರ್ಗಸೂಚಿಯನ್ನು ಎಪ್ರಿಲ್ 30ರೊಳಗಾಗಿ ಎಲ್ಲಾ ಸಂಬಂಧಿತ ಪ್ರಾಧಿಕಾರಗಳೊಂದಿಗೆ ಚರ್ಚಿಸಿ ನ್ಯಾಯಾಲಯದ ಮುಂದಿಡಬೇಕು ಎಂದೂ ಆದೇಶಿಸಲಾಗಿದೆ. ಮುಂದಿನ ವಿಚಾರಣೆ ಎಪ್ರಿಲ್ 20ರಂದು ನಡೆಯಲಿದೆಯೆಂದು ನ್ಯಾಯಾಲಯ ತಿಳಿಸಿದೆ.


SHARE THIS

Author:

0 التعليقات: