Thursday, 22 April 2021

ಮುಂಬೈ ಕೋವಿಡ್-19 ಆಸ್ಪತ್ರೆಯಲ್ಲಿ ಅಗ್ನಿ ದುರಂತ: ಸಾವಿನ ಸಂಖ್ಯೆ 13ಕ್ಕೆ ಏರಿಕೆ


 ಮುಂಬೈ ಕೋವಿಡ್-19 ಆಸ್ಪತ್ರೆಯಲ್ಲಿ ಅಗ್ನಿ ದುರಂತ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಮುಂಬೈ: ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ವಸಾಯ್ ವಿರಾರ್ ವಿಜಯ ವಲ್ಲಭ್ ಕೋವಿಡ್-19 ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಮುಂಜಾನೆ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿತು. ಇಡೀ ಆಸ್ಪತ್ರೆಗೆ ಬೆಂಕಿ ವ್ಯಾಪಿಸಿದ್ದು, ಮೃತರ ದೇಹಗಳು ಸುಟ್ಟು ಕರಕಲಾಗಿರುವ ಕಾರಣದಿಂದ ಮೃತರನ್ನು ಗುರುತಿಸುವ ಸ್ಥಿತಿಯಲ್ಲಿಲ್ಲ. ವಸಾಯ್ ವಿವಾರ ಪಾಲಿಕೆ ಅಗ್ನಿಶಾಮಕ ದಳ ಸಿಬ್ಬಂದಿ ಒಂದು ಗಂಟೆಯಲ್ಲಿ ಬೆಂಕಿ ನಿಯಂತ್ರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದು, ಸ್ಥಳೀಯ ಶಾಸಕ ಹಿತೇಂದ್ರ ಠಾಕೂರ್ ಸ್ಥಳಕ್ಕೆ ಧಾವಿಸಿದ್ದಾರೆ.

ಐಸಿಯುನಲ್ಲಿದ್ದ ಎಸಿ ಘಟಕ ಸ್ಫೋಟಗೊಂಡದ್ದು ದುರಂತಕ್ಕೆ ಕಾರಣ ಎಂದು ಜಿಲ್ಲಾ ವಿಕೋಪ ನಿಯಂತ್ರಣ ಕೋಶದ ಮುಖ್ಯಸ್ಥ ವಿವೇಕಾನಂದ ಕದಂ ವಿವರಿಸಿದ್ದಾರೆ. ಆಸ್ಪತ್ರೆಯಲ್ಲಿ 16 ಮಂದಿ ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು.

ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಈ ದುರಂತ ಸಂಭವಿಸಿದೆ. ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ರೋಗಿಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವೈದ್ಯರು ಹರಸಾಹಸಪಡುತ್ತಿರುವ ನಡುವೆಯೇ ಈ ಭೀಕರ ಆಕಸ್ಮಿಕ ಸಂಭವಿಸಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಆಸ್ಪತ್ರೆಗಳಲ್ಲಿ ಸಂಭವಿಸಿದ ಮೂರನೇ ದೊಡ್ಡ ಪ್ರಕರಣ ಇದಾಗಿದೆ. ಮಾರ್ಚ್ ನಲ್ಲಿ ಭಂದೂಪ್ ಪ್ರದೇಶದ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದಲ್ಲಿ 10 ಮಂದಿ ಜೀವ ಕಳೆದು ಕೊಂಡಿದ್ದರು. ದಹಿಸಾರ್ ಜಂಬೋ ಕೋವಿಡ್ ಸೆಂಟರ್‌ನಲ್ಲಿ ದುರಂತ ಸಂಭವಿಸಿದಾಗ 50ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತವಾಗಿ ಬೇರೆಡೆಗೆ ಸಾಗಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.


SHARE THIS

Author:

0 التعليقات: