ಪಬ್ಜಿ ಆಟದ ಸಂಬಂಧ ಉಂಟಾದಂತ ಕ್ಷುಲ್ಲಕ ಕಾರಣಕ್ಕಾಗಿ 12 ವರ್ಷದ ಬಾಲಕನ ಕೊಲೆ
ಮಂಗಳೂರು : ಕ್ಷುಲ್ಲಕ ವಿಚಾರಕ್ಕೆ 12 ವರ್ಷದ ಬಾಲಕನನ್ನು ಕೊಲೆ ಮಾಡಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ.ರೋಡ್ ನಲ್ಲಿರುವ ನಿರ್ಜನ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ. ಇಂತಹ ಬಾಲಕನನ್ನು ಪಬ್ಜಿ ಆಟದ ಸಂಬಂಧ ಉಂಟಾದಂತ ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೆ.ಸಿ.ರೋಡ್ ಕೋಮರಂಗಳ ನಿವಾಸಿ ಹನೀಫ್ ಎಂಬವರ ಪುತ್ರ ಆಕಿಫ್ (12) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ 9 ಗಂಟೆಗೆ ಆಕಿಫ್ ಮದ್ರಸದಿಂದ ಮನೆಗೆ ಬಂದಿದ್ದು, ಬಳಿಕ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಬಾಲಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ಇಲ್ಲಿನ ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸ್ ಕಮಿಷನರ್ ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ , ಡಿಸಿಪಿ ಹರಿರಾಂ, ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಮತ್ತು ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓರ್ವ ಸೆರೆ: ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಮೊಬೈಲ್ ಗೆ ಬಂದ ಕೊನೆಯ ಕರೆಯ ಆಧಾರದಲ್ಲಿ ಸ್ಥಳೀಯ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
0 التعليقات: