ಎಂಟು ಹಂತಗಳಲ್ಲಿ ಪಶ್ಚಿಮ ಬಂಗಾಳ ಚುನಾವಣೆ: ಚುನಾವಣಾ ಆಯೋಗ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಉದ್ದೇಶಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಎಂ ಎಲ್ ಶರ್ಮ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಇಂದು ಅರ್ಜಿ ಸಲ್ಲಿಸಿದ್ದು, ಸಂವಿಧಾನದ ವಿಧಿ 14 ಮತ್ತು 21ನ್ನು ಉಲ್ಲಂಘಿಸುತ್ತಿರುವುದರಿಂದ ಎಂಟು ಹಂತಗಳಲ್ಲಿ ನಡೆಸಲು ಉದ್ದೇಶಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಡೆ ನೀಡಬೇಕೆಂದು ಕೋರಿದ್ದಾರೆ.
ಮೊನ್ನೆ ಫೆಬ್ರವರಿ 26ರಂದು ಪಶ್ಚಿಮ ಬಂಗಾಳ, ಪುದುಚೆರಿ ಸೇರಿದಂತೆ ತಮಿಳು ನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಎಂಟು ಸುತ್ತುಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ ತಮಿಳು ನಾಡು, ಕೇರಳ, ಪುದುಚೆರಿಗಳಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತ್ತು ಅಸ್ಸಾಂ ರಾಜ್ಯದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ಏರ್ಪಡಲಿದೆ.
ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಇನ್ನು ಕೆಲ ದಿನಗಳಲ್ಲಿ ವಿಚಾರಣೆಗೆ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಅನಗತ್ಯವಾಗಿ ಧಾರ್ಮಿಕ ಘೋಷಣೆಗಳನ್ನು ಕೂಗುವುದರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೂಡ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
"ಜೈ ಶ್ರೀ ರಾಮ್ ಹಾಗೂ ಇತರೆ ಧಾರ್ಮಿಕ ಘೋಷಣೆಗಳು ಅಸಂಗತತೆಯನ್ನು ಸೃಷ್ಟಿಸುತ್ತಿವೆ ಎಂದು ಐಪಿಸಿ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ಅಡಿಯಲ್ಲಿ ಅಪರಾಧವಾಗಿದೆ, ಪಕ್ಷಗಳು ಇದನ್ನು ತಮ್ಮ ಚುನಾವಣಾ ಲಾಭಕ್ಕಾಗಿ ಮಾತ್ರ ಘೋಷಿಸುತ್ತಿವೆ ಎಂದು ವಕೀಲ ಎಂ ಎಲ್ ಶರ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
0 التعليقات: