ಪಶ್ಚಿಮ ಬಂಗಾಳ: ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ, ಆರು ಮಂದಿಗೆ ಗಾಯ
ಕೋಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ ವ್ಯಕ್ತಿಯೊಬ್ಬರ ಮನೆಯಲ್ಲಿಯೇ ಬಾಂಬ್ ತಯಾರಿಸುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಇವರೆಲ್ಲರೂ ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರು ಎಂದು ಅವರು ತಿಳಿಸಿದ್ದಾರೆ.
ಆದರೆ, ಎಲ್ಲ ಆರು ಮಂದಿ ಬಿಜೆಪಿ ಬೆಂಬಲಿಗರು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಗಾಯಗೊಂಡವರ ಕುಟುಂಬದ ಸದಸ್ಯರು ದೂರಿದ್ದಾರೆ.
'ಕುಟುಂಬದ ಸದಸ್ಯರ ಹೇಳಿಕೆಯನ್ನು ಗಮನಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸ್ಥಳೀಯರಿಂದಲೂ ಮಾಹಿತಿ ಪಡೆಯಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
0 التعليقات: