ಹುಚ್ಚು ಸಾಹಸ: ವಿಡಿಯೋ ನೋಡಿ ತಲೆ ಕೂದಲಿಗೆ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ!
ನವದೆಹಲಿ: ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಜನರು ನಾನಾ ವಿಧವಾದ ಸರ್ಕಸ್ ಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹುಚ್ಚು ಸಾಹಸಗಳಿಗೆ ಕೈ ಹಾಕುವ ಮೂಲಕ ತಮ್ಮ ಜೀವಕ್ಕೆ ಕಂಟಕವನ್ನು ತಂದುಕೊಳ್ಳುತ್ತಾರೆ. ಅಂತದ್ದೆ ಒಂದು ಘಟನೆ ಕೇರಳದಲ್ಲಿ ನಡೆದಿದೆ.
12 ವರ್ಷದ ಹುಡುಗನೊಬ್ಬ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಒಂದರಿಂದ ಪ್ರಭಾವಿತನಾಗಿ ಸೀಮೆ ಎಣ್ಣೆಯನ್ನು ತಲೆಗೆ ಸುರಿದುಕೊಂಡು ಬೆಂಕಿ ಹಚ್ಚುಕೊಳ್ಳುವ ಮೂಲಕ ತನ್ನ ತಲೆಕೂದಲನ್ನು ಸ್ಟ್ರೈಟಿಂಗ್ ಮಾಡಿಕೊಳ್ಳಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಮೃತ ಹುಡುಗನನ್ನು ಶಿವನಾರಾಯಣನ್ ಎಂದು ಗುರುತಿಸಲಾಗಿದ್ದು, ಈತ ತಿರುವನಂತಪುರಂ ಬಳಿ ಇರುವ ವೆಂಗನೂರಿನವನು ಎಂದು ತಿಳಿದು ಬಂದಿದೆ. ಈತ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದ ಎನ್ನಲಾಗಿದೆ.
ಘಟನೆಯ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ಈತ ತನ್ನ ತಲೆ ಕೂದಲನ್ನು ಸ್ಟ್ರೈಟಿಂಗ್ ಮಾಡಿಕೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ನೋಡಿದ್ದು, ಅದರ ಅನ್ವಯ ಮನೆಯ ಬಾತ್ ರೂಂ ನಲ್ಲಿ ಬಾಗಿಲು ಹಾಕಿಕೊಂಡು ತನ್ನ ತಲೆ ಕೂದಲಿಗೆ ಸೀಮೆ ಎಣ್ಣೆಯನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ . ಇದರಿಂದ ಆತನ ದೇಹಕ್ಕೆ ಬೆಂಕಿ ತಗುಲಿದೆ ಎಂದಿದ್ದಾರೆ.
ಈ ಸಮಯದಲ್ಲಿ ಮನೆಯಲ್ಲಿ ಆತನ ಅಜ್ಜಿ ಮಾತ್ರ ಇದ್ದು. ಘಟನೆ ನಡೆದ ತಕ್ಷಣ ಆತನನ್ನು ರಕ್ಷಿಸಲು ಕೂಡಾ ಸಾಧ್ಯವಾಗಿಲ್ಲ. ತದನಂತರ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸುಟ್ಟ ಗಾಯಗಳಿಂದಾಗಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0 التعليقات: