ಸಿಡಿ ಸುಳಿಯಲ್ಲಿ ಸಿಲುಕಿದ ಸಹೋದರನ ಬೆಂಬಲಕ್ಕೆ ನಿಂತ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು,ಮಾ.3- ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾದ ಸಿಡಿ ನಕಲಿಯಾಗಿದ್ದು, ಇದರ ಸತ್ಯಸತ್ಯಾತೆ ತಿಳಿಯಲು ತನಿಖೆಗೆ ಒಳಪಡಿಸುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಜಾರಕಿಹೋಳಿ ಕುಟುಂಬದ ವಿರುದ್ದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ನಾವು ಸಹೋದರನ ಬೆಂಬಲಕ್ಕೆ ನಿಲ್ಲುತ್ತೇವೆ. ನನ್ನ ಸಹೋದರ ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದೊಂದು ನಕಲಿ ಸಿಡಿ ಯಾಗಿದೆ. ಈ ಬಗ್ಗೆ ಸಿಬಿಐ ಅಥವಾ ಸಿಐಡಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಈ ಘಟನೆಯ ಬಗ್ಗೆ ಸತ್ಯಾಸತ್ಯತೆ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ಸಿಎಂಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಪ್ರಕರಣದ ವಿಡಿಯೋಗಳನ್ನು ಯೂಟ್ಯೂಬ್ಗೆ ವಿದೇಶಗಳಿಂದ ಅಪ್ಲೋಡ್ ಮಾಡಿರುವ ಮಾಹಿತಿಗಳಿವೆ. ಹೀಗಾಗಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೇವೆ.
ನಾವು ಸಹ ಕಾನೂನು ಹೋರಾಟ ಮಾಡುತ್ತೇವೆ ಎಂದರು. ರಮೇಶ್ ಜಾರಕಿಹೋಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಸಿಡಿ ಬಿಡುಗಡೆ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ಆರೋಪಿಸಿದರು.
ಸಿಡಿ ಬಿಡುಗಡೆ ಮಾಡಿರುವ ವ್ಯಕ್ತಿ ವಿರುದ್ದ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ವಕೀಲರ ಜತೆ ಮಾತುಕತೆ ನಡೆಸಲಾಗುತ್ತಿದೆ. ಪ್ರಕರಣದ ಸಮಗ್ರ ತನಿಖೆಯಾಗಬೇಕಿದೆ. ಇದರಿಂದಾಗಿ ಸತ್ಯ ಹೊರಬರುತ್ತದೆ ಎಂದು ಹೇಳಿದರು.
ಈ ರೀತಿ ಸಿಡಿಗಳನ್ನು ಗಂಭೀರವಾಗಿ ಪರಿಗಣಿಸುತ್ತಾ ಹೋದರೆ ರಾಜಕಾರಣ ಮಾಡುವುದೇ ಕಷ್ಟವಾಗುತ್ತದೆ. ವಿಧಾನಸಭೆಯಲ್ಲಿ ಅರ್ಧದಷ್ಟು ಮಂದಿ ಖಾಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಮೇಶ್ ಜಾರಕಿಹೋಳಿ ಬೆಂಗಳೂರಿನಲ್ಲಿ ಇದ್ದಾರೆ. ದೆಹಲಿಗೆ ಹೋಗುತ್ತಿಲ್ಲ. ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರಕಾರಣದ ಕುರಿತು ವಿವರಣೆ ನೀಡಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
0 التعليقات: