Wednesday, 31 March 2021

ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ


 ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 

ಹೊಸದಿಲ್ಲಿ: ಸೂಪರ್ ಸ್ಟಾರ್ ಖ್ಯಾತಿಯ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಬೆಳಗ್ಗೆ ಘೋಷಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

ಭಾರತೀಯ ಸಿನೆಮಾ ಇತಿಹಾಸದ ಓರ್ವ ಶ್ರೇಷ್ಟ ನಟ ರಜನಿಕಾಂತ್‍ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ-2019ನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ, ನಟ, ನಿರ್ಮಾಪಕ ಹಾಗೂ ಚಿತ್ರಕಥೆಗಾರರಾಗಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಜಾವಡೇಕರ್ ಟ್ವೀಟಿಸಿದ್ದಾರೆ. 

70ರ ವಯಸ್ಸಿನ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಕಳೆದ ವರ್ಷದ ಡಿಸೆಂಬರ್ ನಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ತನ್ನ ಯೋಜನೆಯನ್ನು ಕೈಬಿಟ್ಟಿದ್ದರು.

ಪ್ರತಿಷ್ಠಿತ ಪ್ರಶಸ್ತಿಗಾಗಿ ಈ ವರ್ಷದ ತೀರ್ಪುಗಾರರಾಗಿ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ, ನಿರ್ದೇಶಕ-ನಿರ್ಮಾಪಕ ಸುಭಾಷ್ ಘೈ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಸಂಗೀತ ಸಂಯೋಜಕ ಹಾಗೂ ಗಾಯಕ ಶಂಕರ್ ಮಹಾದೇವನ್ ಹಾಗೂ ಬಿಸ್ವಾಜೀತ್ ಚಟರ್ಜಿ ಅವರಿದ್ದರು.

ರಜನಿಕಾಂತ್ ಗೆ ಈ ಹಿಂದೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ರಜನಿಕಾಂತ್ 1950ರ ಡಿಸೆಂಬರ್ 12ರಂದು ಕರ್ನಾಟಕದ ಮರಾಠಾ ಕುಟುಂಬದಲ್ಲಿ ಜನಿಸಿದ್ದರು. ಬಸ್ ಕಂಡಕ್ಟರ್ ಆಗಿದ್ದ  ರಜನಿ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಚಿತ್ರ ತಾರೆಯರಲ್ಲಿ ಒಬ್ಬರಾಗಿದ್ದಾರೆ.


SHARE THIS

Author:

0 التعليقات: